ADVERTISEMENT

ಸಾಹಿತ್ಯ ಶೂನ್ಯ ತುಂಬುವ ಸಮಯ ಬರಲಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 6:20 IST
Last Updated 19 ನವೆಂಬರ್ 2012, 6:20 IST

ರಾಯಚೂರು: ಸಾಹಿತ್ಯ ಮನನ ಮಾಡಿಕೊಳ್ಳುವ ಕೆಲಸ ದಶಕದಿಂದ ಆಗಿಲ್ಲ. ನಿಜವಾದ ಸಾಹಿತಿ ಗುರುತಿಸಲು ಅಸಾಧ್ಯ ಆಗುತ್ತಿರುವುದರಿಂದ ಅಂಥ ಸಾಹಿತಿಗಳಿಗೂ ಅನ್ಯಾಯ ಆಗುತ್ತಿದೆ. ಸಾಹಿತ್ಯ ಮತ್ತು ಆ ಬಗೆಗಿನ ಚರ್ಚೆ ದಿಕ್ಕು ತಪ್ಪಿವೆ. ಸಾಹಿತ್ಯದ ಈ ಶೂನ್ಯ ತುಂಬುವ ಸಮಯ ಬರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಹೇಳಿದರು.

ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಎಚ್ ಪಂಪಯ್ಯಶೆಟ್ಟಿ ಅಭಿನಂದನಾ ಸಮಿತಿ ಸಂಯುಕ್ತ ಅಶ್ರಯದಲ್ಲಿ ಆಯೋಜಿಸಿದ್ಧ `ಜಿಲ್ಲಾ ಬರಹಗಾರರ ಸಮಾವೇಶ~ ಉದ್ಘಾಟಿಸಿ ಮಾತನಾಡಿದರು.

ಗಟ್ಟಿ ಸಾಹಿತ್ಯ ಬೆಳೆದು ಬಂದ ಈ ನೆಲದಲ್ಲಿ ಬರಹಗಾರರ ಸಮಾವೇಶ ಆಯೋಜಿಸಿರುವುದು ಪ್ರಶಂಸನೀಯ. ಸಾಹಿತ್ಯದ ತಳಹದಿ, ಮೌಲ್ಯ, ಭಾಷೆಯನ್ನು ಪತ್ರಿಕೆಗಳೂ ಮೈಗೂಡಿಸಿಕೊಂಡಿವೆ. ಸಾಹಿತ್ಯಿಕ ಭಾಷೆಯಲ್ಲಿ ಪತ್ರಿಕೆಗಳು ಬರುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ. ಸಾಹಿತ್ಯ ವಲಯದ ನವ್ಯ ಚಳುವಳಿ, ಪ್ರಗತಿಶೀಲ ಚಳುವಳಿ, ಬಂಡಾಯ ಸಾಹಿತ್ಯ ಚಳುವಳಿ ಹೀಗೆ ಎಲ್ಲ ಸಂದರ್ಭದಲ್ಲೂ ಪತ್ರಿಕೆಗಳು ಸಾಹಿತ್ಯ ವಲಯದ ಸಂವೇದನೆಗಳನ್ನು ತಲುಪಿಸುವ ಕೆಲಸ ಮಾಡಿವೆ ಎಂದು ಹೇಳಿದರು.

ಎಚ್. ಪಂಪಯ್ಯಶೆಟ್ಟಿ ಅವರು ಒಬ್ಬ ಸಾಹಿತಿ, ಪತ್ರಕರ್ತ, ಸಂಘಟಕರಾಗಿ ಮಾಡಿದ ಸಾಧನೆ ಗಮನಾರ್ಹವಾದುದು. ವೈಶ್ಯವಾರ್ತೆ ಎಂಬ ಪತ್ರಿಕೆಯನ್ನು 12 ವರ್ಷದಿಂದ ನಡೆಸಿಕೊಂಡು ಬರುತ್ತಿರುವುದು ಪ್ರಶಂಸನೀಯ. ಪತ್ರಿಕೆಗಳಿಗೆ ಸಾಹಿತ್ಯ, ಸಾಹಿತಿಯೇ ಮೂಲ. ಸಾಹಿತಿಗಳ ಕೈಂಕರ್ಯ ದೊಡ್ಡದು. ಡಿ.ವಿ ಗುಂಡಪ್ಪ, ಮಾಸ್ತಿಯವರಂಥ ಅನೇಕ ಮಹನೀಯರು ಸಾಹಿತ್ಯ ಮತ್ತು ಪತ್ರಿಕೆ ಮೂಲಕ ವಿಚಾರಗಳನ್ನು ಸಮಾಜಕ್ಕೆ ತಿಳಿಸಿದವರು. ಅಂಥದ್ದೇ ಕಾರ್ಯವನ್ನು ಪಂಪಯ್ಯಶೆಟ್ಟಿ ಅವರು ಸಾಹಿತ್ಯಕ್ಕೆ ಪೂರಕವಾದ ಕೆಲಸವನ್ನು ಪತ್ರಿಕೆ ಮೂಲಕ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಮುಖ್ಯ ಅತಿಥಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ, ಬರಹಗಾರರನ್ನ ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪ್ರಜಾವಾಣಿ ಪತ್ರಿಕೆ ಕಾರ್ಯ ಗಮನಾರ್ಹ. ಅದರಲ್ಲೂ ಪತ್ರಿಕೆ ನಡೆಸುವ ಕಥಾ ಸ್ಪರ್ಧೆ, ಕಾವ್ಯ ಸ್ಪರ್ಧೆಯಲ್ಲಿ ಈ ಜಿಲ್ಲೆಯ ಪ್ರತಿಭಾನ್ವಿತರ ಪ್ರತಿಭೆ ಗುರುತಿಸಿರುವುದು ಸಾಹಿತಿ, ಬರಹಗಾರರಿಗೆ ಆ ಪತ್ರಿಕೆ ತೋರುವ ಕಾಳಜಿ ವ್ಯಕ್ತವಾಗುತ್ತದೆ ಎಂದು ನುಡಿದರು.

ಜಿಲ್ಲಾ ಕಸಾಪದಲ್ಲಿ ಈ ಮೊದಲು 78 ದತ್ತಿ ಇದ್ದವು. ತಾವು ಅಧ್ಯಕ್ಷರಾದ ಬಳಿಕ 12 ದತ್ತಿಗಳು ಬಂದಿವೆ. ದತ್ತಿ ಮೊತ್ತವನ್ನು 10 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದ ಅವರು 12 ದತ್ತಿಗಳ ಪಟ್ಟಿಯನ್ನು ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಅವರಿಗೆ ಹಸ್ತಾಂತರಿಸಿದರು.
ಮುಖ್ಯ ಅತಿಥಿ ಎಚ್. ಪಂಪಯ್ಯಶೆಟ್ಟಿ ಮಾತನಾಡಿ, ಯುವ ಸಾಹಿತಿ ಬಳಗದ ಸಹಕಾರ ಮತ್ತು ಉತ್ಸಾಹ, ಜಿಲ್ಲೆಯ ಸಾಹಿತಿಗಳ ಬೆಂಬಲ ಮತ್ತು ಪ್ರೋತ್ಸಾಹದಿಂದ ಹಲವು ದಶಕಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ರೀತಿ ಕೆಲಸ ಮಾಡಲು ಸಹಕಾರಿ ಆಗಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಮಾತನಾಡಿ, ಹೊಟ್ಟೆ ತುಂಬಿಸುವ ಭಾಷೆಗೆ ಅತೀಯಾದ ವ್ಯಾಮೋಹ ಸಲ್ಲ. ಕನ್ನಡದ ದಾಸರಾಗಿ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸ ಆಗಬೇಕು. ಈ ಭಾಗದ ಪ್ರತಿಭಾವಂತರನ್ನು ಗುರುತಿಸಿ ಪುರಸ್ಕರಿಸುವ ಕಾರ್ಯ ಆಗಬೇಕು ಎಂದರು.

ಅಭಿನಂದನಾ ಸಮಿತಿ ಸಂಚಾಲಕ ಭಗತರಾಜ ನಿಜಾಮಕಾರಿ, ರಾ. ವಿಜಯಕುಮಾರ, ಭೀಮನಗೌಡ ಇಟಗಿ, ಎಚ್. ದಂಡಪ್ಪ, ಜಿ. ಸುರೇಶ ವೇದಿಕೆಯಲ್ಲಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿದಾನಂದ ಸಾಲಿ ಪ್ರಾಸ್ತಾವಿಕ ಮಾತನಾಡಿದರು. ಮಹಾಂತೇಶ ಬಿರಾದಾರ ಹಾಗೂ ವೆಂಕಟೇಶ ನವಲಿ ನಿರೂಪಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.