ADVERTISEMENT

ಸಿಂಧನೂರು: ನಾಳೆಯಿಂದ ಅನಿರ್ದಿಷ್ಟ ಮುಷ್ಕರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 10:15 IST
Last Updated 25 ಏಪ್ರಿಲ್ 2012, 10:15 IST

ಸಿಂಧನೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೇಲೆ ಅಧಿಕಾರಿಗಳ ದಬ್ಬಾಳಿಕೆ, ಕಾನೂನು ವಿರೋಧಿ ನಡವಳಿಕೆಗಳನ್ನು ಪ್ರತಿಭಟಿಸಿ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ಏ.27ರಿಂದ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿರುವುದಾಗಿ ಕೆಎಸ್‌ಆರ್‌ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್‌ ಫೆಡರೇಷನ್ ಮುಖಂಡ ಶ್ರೀಶೈಲರೆಡ್ಡಿ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ವರ್ಗದ ದೌರ್ಜನ್ಯದಿಂದ ನೌಕರರು ಗುಲಾಮರಿಗಿಂತ ಕನಿಷ್ಟವಾಗಿ ಬದುಕುತ್ತಿದ್ದಾರೆ. ನೌಕರರನ್ನು ಪ್ರತಿನಿಧಿಸುವ ಕಾರ್ಮಿಕ ಸಂಘಗಳ ಮೇಲೆಯೂ ಆಡಳಿತ ವರ್ಗ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಸಂವಿಧಾನಾತ್ಮಕ ಹಾಗೂ ಕಾರ್ಮಿಕ ಕಾನೂನುಗಳ ಹಕ್ಕುಗಳಿಂದ ನೌಕರರನ್ನು ವಂಚಿಸಲಾಗಿದೆ ಎಂದು ಆರೋಪಿಸಿದರು.

ಕಳೆದ 16ವರ್ಷಗಳಿಂದ ಸಾರಿಗೆ ನಿಗಮಗಳು ಕಾರ್ಮಿಕ ಸಂಘದೊಡನೆ ಯಾವುದೇ ಸಂಧಾನವನ್ನು ನಡೆಸದೆ ನಿರಂಕುಶವಾಗಿ ವರ್ತಿಸುತ್ತಾ ಏಕಪಕ್ಷೀಯ ವೇತನ ಪುನರ್‌ವಿಮರ್ಶೆಯನ್ನು ಘೋಷಿಸಿದೆ. ಒಂದು ಲಕ್ಷ ಹತ್ತು ಸಾವಿರ ಕಾರ್ಮಿರನ್ನು ಯೋಗ್ಯ ವೇತನ ಹಾಗೂ ಇತರ ಸೇವಾ ಸೌಲಭ್ಯಗಳಿಂದ ವಂಚಿಸಿದೆ.
 
1996ರ ಪೂರ್ವದಲ್ಲಿ ಔದ್ಯಮಿಕ ವಿವಾದಗಳ ಕಾನೂನು, 1947ರನ್ವಯ ಕೈಗಾರಿಕಾ ಒಪ್ಪಂದಗಳನ್ನು ಕಾರ್ಮಿಕರ ಸಂಘಗಳ ಜೊತೆಗೆ ಚರ್ಚಿಸುವ ಮೂಲಕ ವೇತನ ಪರಿಷ್ಕರಣೆ ಹಾಗೂ ಸೇವಾ ಸ್ಥಿತಿಗತಿಗಳ ಸುಧಾರಣೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಏಕಪಕ್ಷೀಯ ವೇತನ ಪುನರ್‌ವಿಮರ್ಶೆ ಪ್ರಾರಂಭವಾದ ನಂತರ ಶೇ.40ರಷ್ಟು ವೇತನ ಕಡಿಮೆಯಾಗಿದೆ ಎಂದು ಅವರು ವಿವರಿಸಿದರು.

ಮೋಟಾರ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್‌ ಆ್ಯಕ್ಟ್‌ನಲ್ಲಿ ಸಾರಿಗೆ ನೌಕರರ ಕೆಲಸದ ವಿವರ, ಬಸ್ ಶೆಡ್ಯೂಲ್‌ಗಳ ವೇಳಾಪಟ್ಟಿ ನಿಗದಿಪಡಿಸುವ ನಿಯಮಗಳನ್ನು ಉಲ್ಲಂಘಿ ಸಲಾಗಿದೆ. ಚಾಲಕ-ನಿರ್ವಾಹಕ, ತಾಂತ್ರಿಕ, ಕಾರಕೂನ್ ಮುಂತಾದ ಸ್ಥಳಗಳಿಗೆ ನೇಮಕ ಮಾಡಿದ ನೌಕರರನ್ನು ಸ್ಟೈಫಂಡ್ ಅವಧಿಯಲ್ಲಿ ಖಾಯಂ ನೌಕರರಂತೆ ಪೂರ್ಣ ಕೆಲಸ ಮಾಡಿಸಿಕೊಳ್ಳಲಾಗುತ್ತಿದ್ದು ಇಂತಹ ಹಲವಾರು ರೀತಿಯ ಕಾನೂನು ವಿರೋಧಿ ನಡವಳಿಕೆಗಳನ್ನು ಪ್ರತಿಭಟಿಸಿ ಮಾನವ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕೋಸ್ಕರ ಅನಿವಾರ್ಯವಾಗಿ ಮುಷ್ಕರ ನಡೆಸಲು ತೀರ್ಮಾನಿಸಿದೆ ಎಂದು ಶ್ರೀಶೈಲ ರೆಡ್ಡಿ ತಿಳಿಸಿದರು.

ಕಾರ್ಮಿಕ ಮುಖಂಡರಾದ ಸುಲ್ತಾನ, ರಂಗಯ್ಯ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ, ತಾಲ್ಲೂಕು ಮುಖಂಡರಾದ ವೆಂಕನಗೌಡ ಗದ್ರಟಗಿ, ಹನುಮೇಶ ಗಿಣಿವಾರ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.