ರಾಯಚೂರು: ಕಾರ್ಮಿಕರ ಬೇಡಿಕೆಗಳನ್ನು ರಾಜ್ಯ ಮಟ್ಟದಲ್ಲಿ ಈಡೇರಿಸಬೇಕು ಎಂದು ಒತ್ತಾಯಿಸಿ ಸಿ.ಐ.ಟಿ.ಯು. ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.
ರಾಜ್ಯ ಸರ್ಕಾರವು ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಶ್ರೀಮಂತ ಬಂಡವಾಳಗಾರರ ಸೇವೆಯಲ್ಲಿ ತೊಡಗಿದೆ. ಸರ್ಕಾರವು ತನ್ನ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸಾಮಾನ್ಯ ಕನಿಷ್ಠ ಕೂಲಿ ಕಾರ್ಮಿಕರಿಗೆ ರೂ. 10 ಸಾವಿರವನ್ನು ಕೂಲಿಯಾಗಿ ಕೊಡಬೇಕು. ತಜ್ಞರ ಸಮಿತಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು.ಅಲ್ಲದೆ ರಾಜ್ಯ ಸರ್ಕಾರ ಅದನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ಗುತ್ತಿಗೆ, ದಿನಗೂಲಿ ನೌಕರರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು, ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆಗಳಲ್ಲಿ 10 ವರ್ಷ ಸೇವೆ ಸಲ್ಲಿಸಿದ ನೌಕರರನ್ನು ಕಾಯಂ ಮಾಡಬೇಕು, ಹೋರಾಟ ನಿರತರ ಮೇಲಿನ ಪ್ರಕರಣಗಳನ್ನು ವಾಪಸು ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಈಗಾಗಲೇ ಪ್ರಕಟಿಸಿದ ಕನಿಷ್ಠ ವೇತನವನ್ನು ಗ್ರಾಮ ಪಂಚಾಯಿತಿ ನೌಕರರಿಗೆ ನೀಡಬೇಕು, ಅಗತ್ಯವಾದ ಅನುದಾನವನ್ನು ಬಿಡುಗಡೆ ಮಾಡಬೇಕು, ಕಾರ್ಯದರ್ಶಿ ಹುದ್ದೆಗಳ ಬಡ್ತಿಯನ್ನು ಕೂಡಲೇ ಜಾರಿಗೊಳಿಸಬೇಕು, ಎಲ್ಲ ಕಾರ್ಮಿಕರಿಗೆ ನಿವೇಶನ ಹಾಗೂ ಪಡಿತರ ಚೀಟಿ ವಿತರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಮುಖಂಡರಾದ ಎಚ್.ಪದ್ಮಾ, ಶೇಕ್ಷಾಖಾದ್ರಿ, ವೈ.ಈರಣ್ಣ, ವೀರಭದ್ರ, ಪಿ.ಗಿರಿಯಪ್ಪ, ಜಿಲಾನಿ, ಚೆನ್ನಬಸಯ್ಯ, ಶಂಶುದ್ದೀನ್, ಡಿ.ಎಸ್. ಶರಣಬಸವ, ಕೆ.ಜಿ. ವೀರೇಶ, ಸಿದ್ಧಲಿಂಗಯ್ಯ, ವರಲಕ್ಷ್ಮಿ, ಪಾರ್ವತಿ, ಮರಿಯಮ್ಮ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.