ADVERTISEMENT

ಸಿರವಾರ ಬಂದ್ ಸಂಪೂರ್ಣ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 5:20 IST
Last Updated 10 ನವೆಂಬರ್ 2012, 5:20 IST

ಸಿರವಾರ (ಕವಿತಾಳ): ಶಾಲಾ ಮಕ್ಕಳು, ವಿವಿಧ ರಾಜಕೀಯ ಪಕ್ಷಗಳ ಹಿರಿಯ ಮುಖಂಡರು ಹಲವು ಸಂಘಟನೆಗಳು, ಸಂಘ ಸಂಸ್ಥೆಗಳು `ತಾಲ್ಲೂಕು ಕೇಂದ್ರ ಬೇಕೆ ಬೇಕು~ ಎಂದು ಒಕ್ಕೊರಲ ಧ್ವನಿಯಲ್ಲಿ ಕೂಗು ಹಾಕುವ ಮೂಲಕ ತಾಲ್ಲೂಕು ಹೋರಾಟ ಸಮಿತಿ ಶುಕ್ರವಾರ ಕರೆ ನೀಡಿದ್ದ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಜಲಸಂಪನ್ಮೂಲ ಕಚೇರಿಯಿಂದ ದೇವದುರ್ಗ ಕ್ರಾಸ್‌ವರೆಗೆ ಭಾರೀ ಸಂಖ್ಯೆಯಲ್ಲಿ ಮೆರವಣಿಗೆ ಸಾಗಿದ  ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆ ಪದಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಯುವಕರು, ಮಹಿಳಾ ಸಂಘದ ಸದಸ್ಯರು ತಾಲ್ಲೂಕು ಕೇಂದ್ರ ಮಾಡಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಮೆರವಣಿಗೆಗೆ ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ಘೋಷಣೆ ಕೂಗಿದ ಯುವಕರು ಆಯೋಜಕರ ಕಣ್ತಪ್ಪಿಸಿ ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಬಂಕ್‌ಗಳು, ಶಾಲಾ ಕಾಲೇಜುಗಳು, ಅಂಗಡಿಗಳು, ಹೊಟೇಲ್‌ಗಳು ಮತ್ತು ಬ್ಯಾಂಕ್‌ಗಳು ಮುಚ್ಚಿದ್ದರಿಂದ ಸಾರ್ವಜನಿಕರು ಪರದಾಡಿದರು.

ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು ಬಸ್ ಸಂಚಾರ ಎಂದಿನಂತೆ ಇತ್ತು. ದೇವದುರ್ಗ ಕ್ರಾಸ್‌ನಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಘೋಷಣೆ ಕೂಗಿದ ಸಮಿತಿ ಗೌರವಾಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ ತಾಲ್ಲೂಕು ಕೇಂದ್ರಕ್ಕೆ ಸರ್ಕಾರವನ್ನು ಒತ್ತಾಯಿಸಿದರು.

ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಜೆ.ಶರಣಪ್ಪಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಅಸ್ಲಾಂಪಾಶಾ, ಮಲ್ಲಿಕಾರ್ಜುನ ಹಳ್ಳೂರು ಇತರ ಮುಖಂಡರು ಮಾತನಾಡಿ ಸರ್ಕಾರದ ಗಮನ ಸೆಳೆಯಲು ಹೋರಾಟ ತೀವ್ರಗೊಳಿಸುವುದು ಅನಿವಾರ್ಯ ಎಂದರು.

ನೀಲಗಲ್ ಮಠದ ವಿರೂಪಾಕ್ಷಯ್ಯ ಸ್ವಾಮೀಜಿ, ಯರಮರಸ್ ಶ್ರೀಗಳು, ಚರ್ಚ್ ಫಾದರ್ ಸ್ಯಾಮೂಯೆಲ್, ಮುಸ್ಲಿಂ ಧರ್ಮಗುರು ಮಂಜೂರು ಪಾಶಾ ಮತ್ತು ಹೋರಾಟ ಸಮಿತಿ ಗೌರವ ಅಧ್ಯಕ್ಷ ಜೆ.ದೇವರಾಜಗೌಡ ವೇದಿಕೆಯಲ್ಲಿದ್ದರು.

ಸಿರವಾರ, ಚಾಗಭಾವಿ, ಕೆ.ಗುಡದಿನ್ನಿ, ಜಾಗೀರಜಾಡಲದಿನ್ನಿ, ಮಲ್ಲಟ, ಹಣಿಗಿ, ಅತ್ನೂರು, ಕ್ಯಾದಿಗೇರಾ, ಬಲ್ಲಟಗಿ, ಹೀರಾ, ಗಣದಿನ್ನಿ, ನವಲಕಲ್, ಮಾಡಗಿರಿ, ನಾಗಡದಿನ್ನಿ ಮತ್ತು ಪಲಕನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಹಸ್ರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಗಂಗಣ್ಣ ಕಲ್ಲೂರು ಅವರಿಗೆ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.