ರಾಯಚೂರು: ಪ್ರತಿ ವರ್ಷಕ್ಕಿಂತ ಈ ವರ್ಷ ಒಂದಿಷ್ಟು ಮೊದಲೇ ಬಿಸಿಲಿನ ತಾಪ ಶುರುವಾಗಿದೆ. ಬಿಸಿಲನಗರಿ ರಾಯಚೂರಿನಲ್ಲಿ ಜನತೆ ಬಿಸಿಲಿನ ತಾಪ ಅನುಭವಿಸುತ್ತಿದ್ದಾರೆ.
ಬೆಳಿಗ್ಗೆ 7 ಗಂಟೆಯಿಂದಲೇ ಬಿಸಿಲನ ತಾಪ ಶುರುವಾಗಿ ಸಂಜೆ 5 ಗಂಟೆಯವರೆಗೂ ತಾಪ ತಗ್ಗುವುದಿಲ್ಲ. ಮಧ್ಯಾಹ್ನ 12ರ ಬಳಿಕ ನಗರದ ರಸ್ತೆಯಲ್ಲಿ ಜನ ಸಂಚಾರ ತಗ್ಗಿರುತ್ತದೆ. ಮಾರ್ಚ್ ತಿಂಗಳಾಂತ್ಯದಲ್ಲೇ ಇಷ್ಟೊಂದು ಬಿಸಿಲು? ಅಬ್ಬಾ! ಏಪ್ರಿಲ್ ತಿಂಗಳಲ್ಲಿ ಇನ್ನೆಂಥ ಬಿಸಿಲು ಅನುಭವಿಸಬೇಕಾದೀತೋ? ಎಂದು ಜನ ಈಗಲೇ ಬಿಸಿಲಿನ ತಾಪಕ್ಕೆ ಬಸವಳಿಯುವಂಥಾಗಿದೆ.
ಜನತೆಗೆ ಈ ಬಿಸಿಲು ತಾಪ ಸಂಕಟವಾದರೆ ಹಣ್ಣ, ಎಳನೀರು, ಗಡಿಗೆ, ಫ್ರೀಜ್, ಜ್ಯೂಸ್ ಮಾರಾಟಗಾರರಿಗೆ ಭರ್ಜರಿ ವ್ಯಾಪಾರದ ಕಾಲವೇ ಸರಿ. ಈಗ ನಾವು ಹೇಳಲು ಹೊರಟಿರುವುದು ‘ಕಲ್ಲಂಗಡಿ ಹಣ್ಣಿ’ನ ಬಗ್ಗೆ. ಶಿವರಾತ್ರಿ ಬಳಿಕ ಬಿಸಿಲಿನ ತಾಪಕ್ಕೆ ಹೆಚ್ಚಾಗುತ್ತಲೇ ಇದೆ. ಶಿವರಾತ್ರಿಯಿಂದಲೇ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ಧಾವಿಸುತ್ತಿದೆ. ನಗರದ ಪ್ರಮುಖ ರಸ್ತೆಗಳಾದ ಸ್ಟೇಷನ್ ರಸ್ತೆ, ಬಸವೇಶ್ವರ ರಸ್ತೆ ಸೇರಿದಂತೆ ಪ್ರಮುಖ ವೃತ್ತ, ಮಾರುಕಟ್ಟೆ ಪ್ರದೇಶದಲ್ಲಿ ‘ಕಲ್ಲಂಗಡಿ ಹಣ್ಣು’ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ಹತ್ತಿರ ಕಲ್ಲಂಗಡಿ ವ್ಯಾಪಾರ, ಕಲ್ಲಂಗಡಿ ಹಣ್ಣು ಸೇವಿಸುವವರ ದೃಶ್ಯ ಗಮನ ಸೆಳೆಯುತ್ತದೆ.
ರಸ್ತೆ ಪಕ್ಕ ನಾಲ್ಕಾರು ಚಿಕ್ಕ ತಳ್ಳುವ ಗಾಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಕತ್ತರಿಸಿ ಒಪ್ಪ ಓರಣವಾಗಿ ಇಟ್ಟು ಮಾರಾಟ ಮಾಡುವುದು, ಗ್ರಾಹಕರ ಗಮನ ಸೆಳೆದು ಅವರ ಜೇಬಿಗೂ ಹೊರೆಯಾಗದೇ, ಬಿಸಿಲಿನ ತಾಪದಿಂದಲೂ ತಪ್ಪಾಗುವಂತೆ ವ್ಯಾಪಾರ ಇಲ್ಲಿ ನಡೆಯುತ್ತದೆ.
ಹೀಗಾಗಿ ಸಾರ್ವಜನಿಕರು ತಂಡೋಪ ತಂಡವಾಗಿ ಬಂದು ಕಲ್ಲಂಗಡಿ ಹಣ್ಣು ಸೇವಿಸುತ್ತಿರುವುದು ಕಂಡು ಬರುತ್ತದೆ. ಪ್ರತಿನಿತ್ಯ ಒಂದೆರಡು ಸಲ ಇಲ್ಲಿ ಕಲ್ಲಂಗಡಿ ಸೇವಿಸುತ್ತೇವೆ. ಕಚೇರಿಗೆ ಹೋಗುವಾಗ, ಬರುವಾಗ, ಸ್ನೇಹಿತರೊಟ್ಟಿಗೆ ಸೇವಿಸುತ್ತೇವೆ. ದೇಹಕ್ಕೂ ಒಳ್ಳೆಯದು. ಕಡಿಮೆ ಬೆಲೆಯೂ ಇದೆ ಎಂದು ನಾಗರಿಕ ಶಿವು ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.