ADVERTISEMENT

ಸೇತುವೆಯಲ್ಲಿ ಭೋಂಗಾ: ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 6:30 IST
Last Updated 3 ಏಪ್ರಿಲ್ 2013, 6:30 IST

ಲಿಂಗಸುಗೂರ (ಮುದಗಲ್ಲ):  ತಾಲ್ಲೂಕಿನ ಮುದಗಲ್ಲ ಪಟ್ಟಣದಿಂದ ರಾಮತ್ನಾಳ ಸಂಪರ್ಕ ಕಲ್ಪಿಸುವ ಮುದಗಲ್ಲ ಕುಷ್ಟಗಿ ಮುಖ್ಯ ರಸ್ತೆ ತೆಗ್ಗುಗುಂಡಿ ಕಾಣಿಸಿಕೊಂಡು ಸಂಪೂರ್ಣ ಹಾಳಾಗಿದೆ. ಬಹುತೇಕ ಸೇತುವೆಗಳಲ್ಲಿ ಭೋಂಗಾ ಕಾಣಿಸಿಕೊಂಡು ಸಂಚಾರಕ್ಕೆ ಅಡ್ಡಿಯಾಗಿದ್ದರು ದುರಸ್ತಿಗೆ ಮುಂದಾಗದಿರುವುದು ಅಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ಲ ಘಟಕದ ಅಧ್ಯಕ್ಷ ಎಸ್.ಎ. ನಯೀಮ್ ಆರೋಪಿಸಿದ್ದಾರೆ.

ಮುದಗಲ್ಲ ದಿಂದ ಬನ್ನಿಗೋಳ, ಜಾಂತಾಪುರ, ಅಂಕಲಿಮಠ, ತಲೆಕಟ್ಟು, ಮಾಕಾಪುರ, ಹೂನೂರು, ತುರಡಗಿ, ವಂದಾಲಿ, ಆರ್ಯಭೋಗಾಪುರ, ಬ್ಯಾಲಿಹಾಳ, ರಾಮತ್ನಾಳ ಮಾರ್ಗವಾಗಿ ಕುಷ್ಟಗಿ ತಾಲ್ಲೂಕು ಪ್ರವೇಶಿಸುವ ಮುಖ್ಯ ರಸ್ತೆ ಕಳೆದ ಹಲವಾರು ವರ್ಷಗಳಿಂದ ಶಾಶ್ವತ ದುರಸ್ತಿಗೆ ಮುಂದಾಗದೆ ಹೋಗಿದ್ದರಿಂದ 22ಕಿ.ಮೀ. ರಸ್ತೆ ಕ್ರಮಿಸಲು ಒಂದೂವರೆ ತಾಸು ಬೇಕಾಗುತ್ತದೆ. ಸಂಚರಿಸುವ ವಾಹನಗಳ ದುರಸ್ತಿ ಹೆಚ್ಚಾಗಿದ್ದರಿಂದ ಸಂಚಾರ ಸಮಸ್ಯೆ ಎದುರಾಗಿದೆ.

ರಸ್ತೆಯುದ್ದಕ್ಕೂ ಆಳವಾದ ತೆಗ್ಗುಗುಂಡಿಗಳು ಬಿದ್ದಿವೆ. ಅಕ್ರಮ ಗ್ರಾನೈಟ್ ಕಲ್ಲುಗಳ ಸಾಗಣೆಯಿಂದ ಭಾರವಾದ ವಾಹನಗಳ ಸಂಚಾರದಿಂದ ರಸ್ತೆ ಬಳಕೆಗೆ ಯೋಗ್ಯವಲ್ಲದಷ್ಟು ಹದಗೆಟ್ಟಿದೆ. ಈ ಸೇತುವೆಗಳು ಅಲ್ಲಲ್ಲಿ ಕುಸಿತ ಕಂಡಿವೆ. ಭೋಂಗಾ ಕಾಣಿಸಿಕೊಂಡು ರಾಡ್‌ಗಳು ಎದ್ದು ಅದೆಷ್ಟೊ ವಾಹನ  ಅಪಘಾತ ಸಂಭವಿಸಿ ಸಾವು ನೋವು ಸಂಭವಿಸಿವೆ.

ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದರು ಕೂಡ ದುರಸ್ತಿ ಮಾಡಿದ್ದಾಗಿ ಹಣ ಖರ್ಚು ಹಾಕಿರುವುದು ದಾಖಲೆಗಳಿಂದ ದೃಢಪಟ್ಟಿದ್ದು ಪ್ರಯಾಣಿಕರ ಸುಖ ಪ್ರಯಾಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.