ADVERTISEMENT

ಹಿರಿಯರಿಗೆ ಗೌರವವೇ ದೇಶದ ಸಂಸ್ಕೃತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:05 IST
Last Updated 15 ಅಕ್ಟೋಬರ್ 2012, 8:05 IST

ರಾಯಚೂರು: ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ಗೌರವ ಸಲ್ಲಿಸುವುದು ಒಂದು ಪರಂಪರೆ ಎಂದು ನಗರದ ಹಿರಿಯ ವೈದ್ಯರಾದ ಡಾ.ಎಸ್.ಬಿ ಅಮರಖೇಡ್ ಅವರು ಹೇಳಿದರು.

ಇಲ್ಲಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ನಿವೃತ್ತ ನೌಕರರ ಸಂಘ ಹಾಗೂ ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು ರಾಯಚೂರು ಶಾಖೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ವೃದ್ಧರ ಜೀವನವು ಕಷ್ಟಕರವಾಗುತ್ತಿದೆ. ಅದಕ್ಕಾಗಿ ವೃದ್ಧಾಶ್ರಮಗಳು ತಲೆ ಎತ್ತುತ್ತಿರುವುದು ವಿಷಾದನೀಯ. ಆದರೂ, ಇಂಥ ಕಾರ್ಯಕ್ರಮಗಳಿಂದ ಹಿರಿಯರ ಬದುಕಿನ ಬಾಳಿನ ಸಂಜೆಯಲ್ಲಿ ಸ್ವಲ್ಪವಾದರೂ ಶಾಂತಿಯನ್ನು ತಂದುಕೊಡುತ್ತಿವೆ. ಹಿರಿಯರ ಅನುಭವಗಳನ್ನು ಸರ್ಕಾರ ಬಳಸಿಕೊಳ್ಳುವ ಮೂಲಕ ಅವರಿಗೂ ಅನುಕೂಲವಾಗಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎನ್ ಸಂಪತ್ ಮಾತನಾಡಿ, ಹಿರಿಯರ ಬದುಕಿನ ಅನುಭವ ಮತ್ತು ಮಾರ್ಗದರ್ಶನವನ್ನು ಸರ್ಕಾರ ಹೇಗೆ ಪಡೆಯಬೇಕು ಎಂಬುವುದರ ಬಗ್ಗೆ ವಿವರಿಸಿದರು.

ಮತ್ತೊಬ್ಬ ಅತಿಥಿ ಮಾನಸಿಕ ರೋಗ ತಜ್ಞ ಡಾ.ವಿ.ಎ ಮಾಲಿಪಾಟೀಲ್ ಮಾತನಾಡಿ, ವೃದ್ಧಾಪ್ಯ ಎಂದರೆ ಏನು ಅದರಿಂದ ಹೊರಬಂದು ಮಾನಸಿಕ ಸ್ಥಿತಿಯಿಂದ ಉಲ್ಲಾಸ ಭರಿತವಾಗಿ ಇರುವ ಬಗ್ಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಬಸವಕೇಂದ್ರದ ಅಧ್ಯಕ್ಷ ಬಿ.ಬಸವರಾಜಪ್ಪ ವಕೀಲ, ಎಪಿಎಂಸಿ ಅಧ್ಯಕ್ಷ ಆರ್.ತಿಮ್ಮಯ್ಯ ಹಾಗೂ ಸಮಾಜ ಸೇವಕರಾದ ಬೆಲ್ಲಂ ನರಸರೆಡ್ಡಿ, ಆರ್‌ಎಪಿಎಂಸಿ ಅಧ್ಯಕ್ಷ ಜಯವಂತರಾವ್ ಪತಂಗೆ, ಮಲ್ಲಿಕಾರ್ಜುನ ದೋತರಬಂಡಿ, ಶಾಮರಾವ್ ಗಬ್ಬೂರು, ವಿ.ಎನ್ ಅಕ್ಕಿ, ದಾನಮ್ಮ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮಹಾಂತೇಶ ಮಸ್ಕಿ ಸನ್ಮಾನಿಸಲಾಯಿತು. ಅಲ್ಲದೇ 75 ವಯೋಮಿತಿ ಮೀರಿದ 40ಜನ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಣ ತಜ್ಞ ರಾಮಣ್ಣ ಹವಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಮಹಾದೇಪ್ಪ ಹಂಚಿನಾಳ ವಹಿಸಿದ್ದರು. ರಾಜ್ಯ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ರೇವಣಸಿದ್ಧಯ್ಯ, ಎಸ್‌ಬಿಎಂ ಬ್ಯಾಂಕ್‌ನ ನಿವೃತ್ತ ನೌಕರ ರವಿಕುಮಾರ, ಜಿಲ್ಲೆಯ 387 ನಿವೃತ್ತ ನೌಕರರ ಪಾಲ್ಗೊಂಡಿದ್ದರು. ಸಂಘದ ಕಾರ್ಯದರ್ಶಿ ವೈ.ಮಹಾದೇವಪ್ಪ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ಅಜೀಜಾ ಸುಲ್ತಾನ ನಿರೂಪಿಸಿದರು. ಶಾಮರಾವ್ ಗಬ್ಬೂರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.