ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಕುರಿತ ಮಸೂದೆ ಮಂಡನೆಗೆ ಕಾಂಗ್ರೆಸ್ ಪಕ್ಷ ನೇತೃತ್ವದ ಯುಪಿಎ ಸರ್ಕಾರವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಮೇ 7ರಂದು ನಡೆಯುವ ಲೋಕಸಭೆ ಅಧಿವೇಶನದಲ್ಲಿ ಮಂಡನೆ ಮಾಡುವ ನಿರೀಕ್ಷೆ ಇದೆ.
ಇದಕ್ಕೆ ವಿರೋಧ ಪಕ್ಷವಾದ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಕಿಂಚಿತ್ ಆಕ್ಷೇಪಣೆ ಇಲ್ಲದೇ ಒಪ್ಪಿಗೆ ಸೂಚಿಸುವ ಮೂಲಕ ಈ ಭಾಗದ ಬಹು ದಿನದ ಬೇಡಿಕೆ ಈಡೇರಿಕೆಗೆ ಸ್ಪಂದಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಜನಾಂದೋಲನ ಮತ್ತು ಹೈ.ಕ ಹೋರಾಟ ಸಮಿತಿ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು.
ಭಾನುವಾರ ಎರಡೂ ಸಂಘಟನೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಲ್ಬರ್ಗಕ್ಕೆ ಈಚೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಮಸೂದೆ ಶೀಘ್ರ ಮಂಡನೆಗೆ ಒತ್ತಾಯಿಸಿದ ಸಂದರ್ಭದಲ್ಲಿ ಈ ಕುರಿತ ಎಲ್ಲ ಪ್ರಕ್ರಿಯೆ ಮುಗಿದಿದೆ.
ಮೇ 7ರಿಂದ ಆರಂಭವಾಗುವ ಲೋಕಸಭಾ ಅಧಿವೇಶನದಲ್ಲಿ ಮಂಡನೆ ಮಾಡಲು ಉತ್ಸುಕವಾಗಿದೆ. ವಿರೋಧ ಪಕ್ಷಗಳ ವಿರೋಧ ಇಲ್ಲದೇ ಇದ್ದರೆ ಮಂಡನೆಯಾಗಿ ಶೀಘ್ರ ಘೋಷಣೆ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಈ ನಾಯಕರು ತಮಗೆ ಭರವಸೆ ನೀಡಿದರು ಎಂದು ಹೇಳಿದರು.
ಲೋಕಸಭೆ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ನಾಯಕರು, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ, ಪಕ್ಷದ ಹಿರಿಯ ಮುಖಂಡ, ಎಲ್.ಕೆ ಅಡ್ವಾಣಿ, ಅನಂತಕುಮಾರ, ಸಂಸದರಿಗೆ ಮನವರಿಕೆ ಮಾಡಿಕೊಡಲು ತಮ್ಮ ಸಂಘಟನೆಗಳ ನೇತೃತ್ವದಲ್ಲಿ ಮೇ 7ರಂದು ನಿಯೋಗದಲ್ಲಿ ತೆರಳುವುದಾಗಿ ತಿಳಿಸಿದರು.
ಈ ಹಿಂದೆ ಗುಲ್ಬರ್ಗಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್ ಪುತ್ಥಳಿ ಅನಾವರಣಕ್ಕೆ ಬಂದಾಗ ಭರವಸೆ ನೀಡಿದ್ದ ಎಲ್.ಕೆ ಅಡ್ವಾಣಿ ಅವರು ನಂತರ ಉಪಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮರೆತು ಬಿಟ್ಟರು. ಈಗ ಕೇಂದ್ರ ಸರ್ಕಾರವು ಉತ್ಸುಕತೆ ತೋರಿದೆ. ವಿರೋಧ ಪಕ್ಷವಾದ ಬಿಜೆಪಿಯು ಈ ರಾಜ್ಯದ ಒಂದು ಹಿಂದುಳಿದ ಪ್ರದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ಒಪ್ಪಿಗೆ ಸೂಚಿಸಬೇಕು ಎಂಬುದು ತಮ್ಮ ಸಂಘಟನೆಗಳ ಒತ್ತಾಯವಾಗಿದೆ ಎಂದು ಹೇಳಿದರು.
ಈಗಿನ ಕೇಂದ್ರ ಯುಪಿಎ ಸರ್ಕಾರ ಈಗ್ಗೆ ಮಂಡನೆ ಮಾಡಿದ ಮಹಿಳಾ ಮೀಸಲಾತಿ, ಲೋಕಪಾಲ್, ರಾಷ್ಟ್ರೀಯ ಸುರಕ್ಷಾ ಮತ್ತು ಭಯೋತ್ಪಾದಕ ನಿಗ್ರಹ ಕುರಿತ ಮಸೂದೆ ಮಂಡನೆಗೆ ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಕಣ್ಣ ಮುಂದಿದೆ. ಈಗ 371 ಕಲಂ ತಿದ್ದುಪಡಿ ಕುರಿತ ಮಸೂದೆ ವಿಷಯದಲ್ಲೂ ಅಂಥದೇ ನಡೆ ವಿರೋಧ ವಿರೋಧ ಪಕ್ಷಗಳಿಂದ ಆಗಬಾರದು ಎಂಬ ಆಶಯದಿಂದ ಸಂಘಟನೆ ಲೋಕಸಭೆ ವಿರೋಧ ಪಕ್ಷದ ಮುಖಂಡರಿಗೆ ಮನವಿ ಮಾಡಲು ನಿಯೋಗದಲ್ಲಿ ತೆರಳುತ್ತಿದೆ ಎಂದರು.
ರಾಜ್ಯದ ಸಂಸದರು, ಸಚಿವರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ಹಿರಿಯ ಮುಖಂಡರು ಪಕ್ಷಾತೀತವಾಗಿ ಈ ದಿಶೆಯಲ್ಲಿ ಬೆಂಬಲ ಸೂಚಿಸಿ ಒತ್ತಡ ಹೇರಬೇಕು ಎಂದು ಮನವಿ ಮಾಡಲಾಗುತ್ತಿದೆ ಎಂದರು.ರಜಾಕ್ ಉಸ್ತಾದ್, ಬಂದಪ್ಪಗೌಡ, ಶಿವಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.