ADVERTISEMENT

23ರಂದು ವಿಧಾನಸೌಧ ಮುತ್ತಿಗೆ: ಮಹಾಂತೇಶ

ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:11 IST
Last Updated 9 ಜನವರಿ 2014, 6:11 IST

ರಾಯಚೂರು: ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ, ಸಮಾಜಿಕ ಭದ್ರತೆ ಹಾಗೂ ಗುತ್ತಿಗೆ ಪದ್ಧತಿ ರದ್ದತಿಗೆ  ಸೇರಿದಂತೆ ಅನೇಕ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜನವರಿ 23ರಂದು ಬೆಂಗ­ಳೂರಿನ ಎಪಿಎಂಸಿ ಮಂಡಳಿಗೆ ಮುತ್ತಿಗೆ  ವಿಧಾನಸೌಧಕ್ಕೆ ಮುತ್ತಿಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಿಐಟಿಯು ಸಂಘಟನೆಯ ರಾಜ್ಯ ಘಟಕದ ಕಾರ್ಯ­ದರ್ಶಿ ಕೆ.ಮಹಾಂತೇಶ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಮಿಕರ ಬೇಡಿಕೆ ಈಡೇ­ರಿ­ಕೆಗಾಗಿ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಮನವಿ ಮಾಡಲಾ­ಗಿತ್ತು ಭರವಸೆಯನ್ನು ನೀಡಿತು. ಆದರೆ,ಕಾರ್ಮಿಕರಿಗೆ ಪರಿಹಾರ ಮಾತ್ರ ದೊರಕಲಿಲ್ಲ. ನೂತನ ರಾಜ್ಯ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರಿಗೂ ಕಾರ್ಮಿಕರ ಬೇಡಿಕೆ ಕುರಿತು ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಕಾರ್ಮಿಕರ ಬೇಡಿಕೆಗೆ ಅನೇಕ ಹೋರಾ­ಟಗಳು ನಡೆಸಿದರೂ ಸರ್ಕಾರ ನಿರ್ಲಕ್ಷ್ಯಿಸ­ಲಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ದುಡಿಸಿಕೊಳ್ಳುತ್ತಿರುವ ಸರ್ಕಾರ ಕಾಯಂ ಕೆಲಸವನ್ನು ಸ್ವಲ್ಪ ಹಣದಲ್ಲಿ ಮಾಡಿಸುವ ಉದ್ದೇಶ ಹೊಂದಿದೆ ಎಂದು ಟೀಕಿಸಿದರು.

ಜನವರಿ 22ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಖಾಸ­ಗೀಕರಣ ವಿರೋಧಿಸಿ ಬೆಂಗಳೂರಿನ ಕೃಷಿ ಮಾರಾಟ ಮಂಡಳಿಗೆ ಮುತ್ತಿಗೆ ಪ್ರತಿಭಟನೆಯನ್ನು ಎಪಿಎಂಸಿ ಹಮಾಲಿ ಕಾರ್ಮಿಕರ(ಸಿಐಟಿಯು ಸಂಯೋಜಿತ) ಸಂಘದವತಿಯಿಂದ ನಡೆಸಲಾಗುತ್ತಿದೆ ಎಂದು ಹೇಳಿದರು.

ಎಪಿಎಂಸಿಗಳಲ್ಲಿನ ಹಮಾಲಿ ಕಾರ್ಮಿ­ಕರಿಗೆ ಕಲ್ಯಾಣ ನಿಧಿ ಸ್ಥಾಪನೆ, ಜೀವನ ಭದ್ರತೆ ಸೇರಿದಂತೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವ ಸರ್ಕಾರ ಉದ್ದೇಶ ಖಂಡನೀಯ ಎಂದು ದೂರಿದರು.

ಎಪಿಎಂಸಿಗಳನ್ನು ಮುಚ್ಚಲು ಹೊರಟಿರುವ ಸರ್ಕಾರ ಖಾಸಗಿ ಕಂಪೆನಿಗಳಿಗೆ ನೀಡುವ ಉದ್ದೇಶ ವಿರುದ್ಧ ಹೋರಾಟ ನಡೆಯಲಿದೆ. ಅನಿರ್ದಿಷ್ಟ ಬಂದ್‌ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಭಾರತ್‌ ಸಂಚಾರ ನಿಗಮ (ಬಿಎಸ್‌ಎನ್‌ಎಲ್‌)ಯ ಕಾರ್ಮಿಕರಿಗೆ ಕಾನೂನು ಪ್ರಕಾರ ಯಾವುದೇ ಸೌಕರ್ಯ ಕಲ್ಪಿಸದೇ ವಂಚಿಸಲಾ­ಗುತ್ತಿದೆ. ಗುರುತಿನ ಚೀಟಿ, ಭವಿಷ್ಯನಿಧಿ, ಗ್ರಾಚುಯಿಟಿ ಸೇರಿದಂತೆ ಕಾರ್ಮಿಕರಿಗೆ ಅನೇಕ ಸೌಕರ್ಯ ನೀಡುತ್ತಿಲ್ಲ ಎಂದು ಆಪಾದಿಸಿದರು.

ರಾಯಚೂರು ಜಿಲ್ಲೆಯ ಬಿಎಸ್‌ಎನ್‌ಎಲ್‌ ಸಂಸ್ಥೆಯಲ್ಲಿ ಕಳೆದ 10ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಕೆಲಸದಿಂದ ವಜಾಗೊ­ಳಿಸ­ಲಾಗುತ್ತಿದ್ದು, ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಕಾರ್ಮಿ­ಕರ ಬೇಡಿಕೆ ಈಡೇರಿಸಲು ಕ್ರಮ ಕೈಗೊ­ಳ್ಳಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ, ತಾಲ್ಲೂಕು ಕಾರ್ಯದರ್ಶಿ ಡಿ,ಎಸ್‌ ಶರಣಬಸವ,ಹಮಾಲರ ಸಂಘದ ಅಧ್ಯಕ್ಷ ಯಂಕಪ್ಪ, ಪದಾಧಿಕಾರಿಗಳಾದ ಶಿವಪ್ಪ ಮಸ್ಕಿ, ಬಿಎಸ್‌ಎನ್‌ಎಲ್ ನೌಕರರ ಸಂಘದ ಪ್ರದೀಪ್, ಮುನಿಸ್ವಾಮಿ, ಮಲ್ಲೇಶ ಗಧಾರ, ಶಿವಾನಂದ, ಪ್ರಹ್ಲಾದ್‌ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.