ADVERTISEMENT

236 ಗ್ರಾಮಗಳಲ್ಲಿ ರುದ್ರಭೂಮಿಯೇ ಇಲ್ಲ!

ಶವ ಸಂಸ್ಕಾರಕ್ಕಾಗಿ ರಾಯಚೂರು ಜಿಲ್ಲೆಯಲ್ಲಿ ತಪ್ಪದ ಪರದಾಟ

ಪಿ.ಹನುಮಂತು
Published 8 ಜೂನ್ 2017, 5:35 IST
Last Updated 8 ಜೂನ್ 2017, 5:35 IST
ರಾಯಚೂರು ನಗರದ  ರುದ್ರಭೂಮಿಯೊಂದು ತ್ಯಾಜ್ಯ ವಿಲೇವಾರಿ ಘಟಕವಾಗಿ ಬದಲಾದ ದೃಶ್ಯ
ರಾಯಚೂರು ನಗರದ ರುದ್ರಭೂಮಿಯೊಂದು ತ್ಯಾಜ್ಯ ವಿಲೇವಾರಿ ಘಟಕವಾಗಿ ಬದಲಾದ ದೃಶ್ಯ   

ರಾಯಚೂರು: ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಮಾತ್ರವಲ್ಲ ಮೃತರ ಅಂತ್ಯಕ್ರಿಯೆ ನಡೆಸಲು ಕೂಡ ತೊಂದರೆ ಅನುಭವಿಸುವಂತಾಗಿದೆ. ಜಿಲ್ಲೆಯ 886 ಗ್ರಾಮಗಳ ಪೈಕಿ 236 ಗ್ರಾಮಗಳಲ್ಲಿ ರುದ್ರಭೂಮಿಗಳಿಲ್ಲ.

ಶವ ಸಂಸ್ಕಾರಕ್ಕೆ ಅಗತ್ಯ ಸ್ಥಳವಕಾಶ ಕಲ್ಪಿಸಲು ಸ್ಥಳೀಯ ಆಡಳಿತ ನಿರ್ಲಕ್ಷ್ಯ ಧೋರಣೆ ತಾಳಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ ನಗರದಲ್ಲೂ ಕೂಡ ರುದ್ರಭೂಮಿಗಳ ಕೊರತೆ ಅಪಾರವಾಗಿದೆ. ಶವ ಹೂತಿರುವ ಸ್ಥಳದಲ್ಲೆ ಪುನಾ ಇನ್ನೊಂದು ಶವ ಅಂತ್ಯ ಸಂಸ್ಕಾರ ನಡೆಸುವಂತಹ ಶೋಚನೀಯ ಪರಿಸ್ಥಿತಿಯಿದೆ. ಆದರೂ, ಸ್ಥಳೀಯ ಆಡಳಿತಗಳಾಗಲಿ ಅಥವಾ ಜಿಲ್ಲಾಡಳಿತವಾಗಲಿ ಜಿಲ್ಲೆಯಲ್ಲಿನ ರುದ್ರಭೂಮಿಯ ಸಮಸ್ಯೆ ನೀಗಿಸುವ ಕನಿಷ್ಠ ಪ್ರಯತ್ನವೂ ಮಾಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

ದಿನಕಳೆದಂತೆ ರುದ್ರಭೂಮಿಗಳ ಸಮಸ್ಯೆ ಹೆಚ್ಚುತ್ತಿದೆ. ಅನೇಕ ಕಡೆಗಳಲ್ಲಿ ರುದ್ರಭೂಮಿಗಳು ಒತ್ತುವರಿಯಾಗಿವೆ. ರುದ್ರಭೂಮಿಗೆ ಭೂಮಿ ಮಂಜೂರು ಮಾಡಲು ಹಾಗೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಹಲವಾರು ಸಂಘಟನೆಗಳು ಜಿಲ್ಲಾಡಳಿತಕ್ಕೆ ಅನೇಕ ಸಲ ಮನವಿ ಸಲ್ಲಿಸಿವೆ. ಪರಿಸ್ಥಿತಿ ಬದಲಾಗುತ್ತಿಲ್ಲ.

ADVERTISEMENT

ರುದ್ರಭೂಮಿಗಳು ಇರುವ ಪ್ರದೇಶಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸುವ ಮೂಲಕ ಅಭಿವೃದ್ಧಿ ಪಡಿಸುವ ಕಾರ್ಯಗಳು ನಡೆದಿಲ್ಲ. ಇದರಿಂದ ರುದ್ರಭೂಮಿಗಳು ಇದ್ದರೂ ಅಂತ್ಯ ಸಂಸ್ಕಾರಕ್ಕೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ. ಕಂದಾಯ ಗ್ರಾಮಗಳಲ್ಲಿ ರುದ್ರಭೂಮಿ ಒತ್ತುವರಿ ಮತ್ತು ಮೂಲ ಸೌಕರ್ಯ ಸಮಸ್ಯೆ ಇದೆ. ತಾಂಡಾಗಳಲ್ಲಿ ಹಾಗೂ ದೊಡ್ಡಿಗಳಲ್ಲಿನ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.

**

ಪಾಲನೆಯಾಗದ ಸಚಿವರ ಸೂಚನೆ
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಬರ ಪರಿಶೀಲನೆಗಾಗಿ ಜಿಲ್ಲೆಗೆ ಬಂದಾಗ ರುದ್ರಭೂಮಿಗಳ ಅಭಿವೃದ್ಧಿ ಪಡಿಸಲು ಸರ್ಕಾರ ಅನುದಾನ ಒದಗಿಸಲಿದೆ ಎಂದು ತಿಳಿಸಿದ್ದರು. ಗ್ರಾ.ಪಂ ಮಟ್ಟದಿಂದ ರುದ್ರಭೂಮಿಗಳ ಸಮರ್ಪಕ ವರದಿ ಸಿದ್ಧಪಡಿಸಿ ರುದ್ರಭೂಮಿ ಗಳನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ದ್ದರು. ಆದರೆ ಸಚಿವರು ನೀಡಿದ ಸೂಚನೆ ಪಾಲನೆಯಾಗಿಲ್ಲ.

ನಿಖರ ಮಾಹಿತಿ ಕೊರತೆ : ಕಂದಾಯ ಗ್ರಾಮಗಳಲ್ಲದ ತಾಂಡಾ ಹಾಗೂ ದೊಡ್ಡಿಗಳಲ್ಲಿ ಕೂಡ ರುದ್ರಭೂಮಿಗಳ ಕೊರತೆಯಿದೆ. ರುದ್ರಭೂಮಿಗಳ ಬಗ್ಗೆ ಜಿಲ್ಲಾಡಳಿತಕ್ಕೆ ನಿಖರ ಮಾಹಿತಿ ಇಲ್ಲ.  ಕಂದಾಯ ಗ್ರಾಮಗಳಲ್ಲಿ ಕೂಡ ರುದ್ರಭೂಮಿಗಳು ಸಮರ್ಪಕವಾಗಿಲ್ಲ.

**

ಶವ ಹೂಳಲು ಕೂಡ ಸ್ಥಳ ಒದಗಿಸಲಾಗದ ಆಡಳಿತ ವ್ಯವಸ್ಥೆಯು ಇನ್ನಾದರೂ ಧೋರಣೆ ಬದಲಿಸಿಕೊಂಡು ಶೀಘ್ರವಾಗಿ ಸ್ಮಶಾನ ಭೂಮಿಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು
–ವೀರೇಶ, ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.