ADVERTISEMENT

ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ 29ರಿಂದ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 14:21 IST
Last Updated 4 ಆಗಸ್ಟ್ 2023, 14:21 IST
ಮಂತ್ರಾಲಯದಲ್ಲಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು
ಮಂತ್ರಾಲಯದಲ್ಲಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು   

ರಾಯಚೂರು: ಇಲ್ಲಿಗೆ ಸಮೀಪದ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಆಗಸ್ಟ್ 29ರಿಂದ ಸೆಪ್ಟೆಂಬರ್ 4ರವರೆಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ನಡೆಯಲಿದೆ.

ಆಗಸ್ಟ್ 29ರಂದು ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭಾಉತ್ಸವ, ಧ್ಯಾನೋತ್ಸವ, 30ರಂದು ಶಂಖೋತ್ಸವ, ರಜತ ಮಂಟಪೋತ್ಸವ, 31ರಂದು ಪೂರ್ವಾರಾಧನೆ ಹಾಗೂ ರಜತ ಸಿಂಹ ವಾಹನೋತ್ಸವ ನಡೆಯಲಿದೆ. ಅಂದು ಸಂಜೆ 7ಕ್ಕೆ ‘ರಾಘವೇಂದ್ರ ಅನುಗ್ರಹ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿದ್ವಾನ್ ರಾಮ ವಿಠ್ಠಲಾಚಾರ್ಯ, ಗಾರಕಿಪತಿ ನರಸಿಂಹರಾವ್, ಟಾಟಾ ಸನ್ಸ್‌ನ ಸಿಇಒ ಎಂ.ಎನ್. ಚಂದ್ರಶೇಖರನ್‌, ಪುಣೆಯ ಡಾ.ವಿಶ್ವನಾಥ ಕರಾಡ ಅವರಿಗೆ ಆಂಧ್ರಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್‌ ನಜೀರ್ ಅವರು ಪ್ರಶಸ್ತಿ ಪ್ರದಾನ ಮಾಡುವರು.

ADVERTISEMENT

ರಾಘವೇಂದ್ರ ಸ್ವಾಮೀಜಿ ಭಾವಚಿತ್ರವಿರುವ ಅಂಚೆಪತ್ರ ಬಿಡುಗಡೆ ಮಾಡಲಾಗುವುದು.

ಸೆ. 1ರಂದು ಮಧ್ಯಾರಾಧನೆ, ಅಭಿಷೇಕ, ಗಜರಜತ ಸ್ವರ್ಣ ರಥೋತ್ಸವ, ಸೆ.2ರಂದು ಉತ್ತರ ಆರಾಧನೆ ಹಾಗೂ ಪ್ರತಾಹ ಮಹಾರಥೋತ್ಸವ ನಡೆಯಲಿದೆ.

ನಿತ್ಯ ಕಾರ್ಯಕ್ರಮ: ಆರಾಧನಾ ಮಹೋತ್ಸವದ ಅಂಗವಾಗಿ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಒಂದು ವಾರ ಪ್ರತಿದಿನ ಬೆಳಗಿನ ಜಾವ 4ರಿಂದ 8.30ರವರೆಗೆ ರಾಯರ ಪಾದಪೂಜೆ, ನಿರ್ಮಲ ವಿಸರ್ಜನೆ, ಮೂಲ ರಾಮದೇವರ ಪೂಜೆ, ಬೆಳಿಗ್ಗೆ 11ರಿಂದ ಮಧ್ಯಾಹ್ನ 2.30ರವರೆಗೆ ಶ್ರೀಮೂಲ ರಘುಪತಿ ವೇದವ್ಯಾಸದೇವರ ಪೂಜೆ, ಅಲಂಕಾರ ಸಂತರ್ಪಣೆ, ಹಸ್ತೋದಕ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಗಂಟೆಯ ನಂತರ ವಿದ್ವಾಂಸರಿಂದ ಕೀರ್ತನೆ, ಹಗಲು ದೀವಟಿಗೆ, ಮಂಗಳಾರತಿ, ಸ್ವಸ್ತಿ ವಾಚನ ಹಾಗೂ ಪ್ರಾಕರ ಉತ್ಸವ ನಡೆಯಲಿದೆ.

ಸೆಪ್ಟೆಂಬರ್ 23ರಿಂದ 29ರವರೆಗೆ ಬೆಂಗಳೂರಿನ ವಿದ್ವಾನ್ ಎ.ಗುರುಪ್ರಸಾದಾರ್ಯ ಅವರಿಂದ ಪ್ರೊಷ್ಟಾಪದಿ ಭಗವತ್‌ ಸಪ್ತಾಹ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.