ADVERTISEMENT

ನಗರ ಕೇಂದ್ರ ಗ್ರಂಥಾಲಯ ‘ಹೌಸ್‌ಫುಲ್‌’

ನಾಗರಾಜ ಚಿನಗುಂಡಿ
Published 5 ಜನವರಿ 2018, 6:09 IST
Last Updated 5 ಜನವರಿ 2018, 6:09 IST
ರಾಯಚೂರಿನ ಜಿಲ್ಲಾ ಕೇಂದ್ರ ಗ್ರಂಥಾಲಯದ ರ್‍್ಯಾಕ್‌ಗಳ ಮಧ್ಯ ಸಂದಿಗಳಲ್ಲಿ ವಿದ್ಯಾರ್ಥಿಗಳು ಕುಳಿತು ಓದುತ್ತಿದ್ದ ದೃಶ್ಯವು ಗುರುವಾರ ಕಾಣಿಸಿತು
ರಾಯಚೂರಿನ ಜಿಲ್ಲಾ ಕೇಂದ್ರ ಗ್ರಂಥಾಲಯದ ರ್‍್ಯಾಕ್‌ಗಳ ಮಧ್ಯ ಸಂದಿಗಳಲ್ಲಿ ವಿದ್ಯಾರ್ಥಿಗಳು ಕುಳಿತು ಓದುತ್ತಿದ್ದ ದೃಶ್ಯವು ಗುರುವಾರ ಕಾಣಿಸಿತು   

ರಾಯಚೂರು: ಇಲ್ಲಿರುವ ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯಕ್ಕೆ ಓದಲು ಬರುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಆಸನಗಳಿಲ್ಲದೆ ನೆಲಕ್ಕೆ ಕುಳಿತುಕೊಳ್ಳುತ್ತಿದ್ದಾರೆ! ರಂಗಮಂದಿರ ಹಿಂಭಾಗದಲ್ಲಿರುವ ಗ್ರಂಥಾಲಯದ ಪ್ರಶಾಂತ ವಾತಾವರಣದಲ್ಲಿ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪುಸ್ತಕ ಹಿಡಿದು ಕುಳಿತುಕೊಂಡ ದೃಶ್ಯವು ಪ್ರತಿದಿನವೂ ಗಮನ ಸೆಳೆಯುತ್ತದೆ. ಗ್ರಂಥಾಲಯದ ನೆಲಮಹಡಿ, ಒಂದನೇ ಮಹಡಿ ಭರ್ತಿಯಾಗಿ ಹಾಗೂ ಹೊರಗಡೆ ಉದ್ಯಾನದ ತುಂಬ ವಿದ್ಯಾರ್ಥಿಗಳು ಕುಳಿತಿರುತ್ತಾರೆ. ಬೆಳಿಗ್ಗೆ 9 ರಿಂದಲೇ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಧಾವಿಸಿ ಬರುತ್ತಾರೆ. ತಡವಾಗಿ ಬರುವವರಿಗೆ ಆಸನಗಳು ಸಿಗುವುದಿಲ್ಲ.

ಆಸನಗಳು ಭರ್ತಿಯಾದ ಬಳಿಕ ಬರುವವರು, ಪುಸ್ತಕದ ರ‍್ಯಾಕ್‌ ಸಂದಿಗಳಲ್ಲಿ, ಗ್ರಂಥಾಲಯದೊಳಗೆ ಮೆಟ್ಟಿಲುಗಳ ಮೇಲೆ ಓದುತ್ತಾ ಕುಳಿತುಕೊಳ್ಳುತ್ತಿದ್ದಾರೆ. ಗ್ರಂಥಾಲಯದಲ್ಲಿ ಸುಮಾರು 200 ಆಸನಗಳಿದ್ದರೂ ಸಾಕಾಗುತ್ತಿಲ್ಲ. ಮುಕ್ತವಾಗಿ ಓದಿಕೊಳ್ಳುವುದಕ್ಕೆ ಅನುವು ಮಾಡಿರುವ ಗ್ರಂಥಾಲಯ ಸಿಬ್ಬಂದಿಗೂ ಆಸನ ಹೊಂದಿಸುವುದು ಸಂಕಷ್ಟವಾಗಿದೆ. ವಿದ್ಯಾರ್ಥಿನಿಯರು ಓದುವುದಕ್ಕೆ ಪ್ರತ್ಯೇಕ ಸ್ಥಳವಿದ್ದರೂ ಅವರಿಗೂ ಆಸನಗಳು ಸಾಕಾಗುತ್ತಿಲ್ಲ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ವಿಭಾಗ, ಇಂಟರ್‌ನೆಟ್‌ ಬಳಸಿಕೊಂಡು ಜ್ಞಾನಾರ್ಜನೆ ಮಾಡುವ ವಿಭಾಗ, ನಿಯತಕಾಲಿಕೆ ವಿಭಾಗ, ಕಥೆ, ಕಾದಂಬರಿ ಓದುವವರು ಹಾಗೂ ಪತ್ರಿಕೆಗಳನ್ನು ಓದುವವರಿಗೆ ಪ್ರತ್ಯೇಕ ಆಸನಗಳನ್ನು ಹಾಕಲಾಗಿದೆ. ಯಾವ ವಿಭಾಗದಲ್ಲಿ ನೋಡಿದರೂ ‘ಹೌಸ್‌ಫುಲ್‌’ ನೆಲಕ್ಕೆ ಕುಳಿತುಕೊಳ್ಳುವುದಕ್ಕೆ ಅವಕಾಶ ಪರಿಸ್ಥಿತಿ ಕಾಣುತ್ತದೆ.

ADVERTISEMENT

‘ಕೆಲವು ಜಿಲ್ಲೆಗಳಲ್ಲಿ ಗ್ರಂಥಾಲಯಗಳು ಜನರಿಲ್ಲದೆ ಬಿಕೋ ಎನ್ನುತ್ತವೆ. ಮೊಬೈಲ್‌ ಬಳಸುವ ಈ ಕಾಲದಲ್ಲಿ ತುಂಬಾ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪುಸ್ತಕ ಓದುವುದಕ್ಕೆ ಬರುತ್ತಿರುವುದು ರಾಯಚೂರಿನಲ್ಲಿ ವಿಶೇಷ. ಪ್ರತಿ ದಿನ ಕನಿಷ್ಠ ಒಂದು ಸಾವಿರ ಓದುಗರು ಗ್ರಂಥಾಲಯಕ್ಕೆ ಭೇಟಿ ಕೊಡುತ್ತಾರೆ. ಗ್ರಂಥಾಲಯದಲ್ಲಿ ನೋಂದಣಿ ಮಾಡಿಕೊಳ್ಳುತ್ತೇವೆ. ಸುಮಾರು 42 ಸಾವಿರ ಜನರು ಪುಸ್ತಕಗಳನ್ನು ಎರವಲು ತೆಗೆದುಕೊಂಡು ಹೋಗುವುದಕ್ಕೆ ನೋಂದಾಯಿಸಿಕೊಂಡಿದ್ದಾರೆ’ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಎಂ.ಎಸ್‌. ರೆಬಿನಾಳ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

‘ವಿದ್ಯಾರ್ಥಿಗಳು ಕುಳಿತುಕೊಳ್ಳುವುದಕ್ಕೆ ಜಾಗ ಸಾಕಾಗುತ್ತಿಲ್ಲ. ಅನಿವಾರ್ಯವಾಗಿ ಅಲ್ಲಲ್ಲಿ ಕುಳಿತು ಓದುತ್ತಾರೆ. ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ಈಚೆಗೆ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ’ ಎಂದರು.

ಜಾಗವಿಲ್ಲದೆ ಕೆಳಗೆ ಕುಳಿತಿದ್ದ ನವಯುಗ ಕಾಲೇಜಿನ ವಿದ್ಯಾರ್ಥಿ ವೀರೇಶ ಅವರನ್ನು ಕೇಳಿದಾಗ ‘ನಾನು ಬಂದಾಗ ಕುರ್ಚಿಗಳೆಲ್ಲ ತುಂಬಿದ್ದವು. ಅದಕ್ಕಾಗಿ ಕೆಳಗೆ ಕುಳಿತು ಓದುತ್ತಿದ್ದೇನೆ. ಹಾಸ್ಟೇಲ್‌ನಲ್ಲಿ ಗದ್ದಲದ ವಾತಾವರಣ ಇರುತ್ತದೆ; ಓದುವುದಕ್ಕೆ ಆಗುವುದಿಲ್ಲ. ಗ್ರಂಥಾಲಯ ಪ್ರಶಾಂತವಾಗಿದೆ; ಓದುವುದಕ್ಕೆ ಅನುಕೂಲವಿದೆ’ ಎಂದು ಹೇಳಿದರು.

1.5 ಲಕ್ಷ ಪುಸ್ತಕಗಳು

ಗ್ರಂಥಾಲಯದಲ್ಲಿ ಸುಮಾರು 1.5 ಲಕ್ಷ ಪುಸ್ತಕಗಳಿವೆ. ಸಾಹಿತ್ಯ, ಕಲೆ, ಇತಿಹಾಸ, ವಿಜ್ಞಾನ, ಕಥೆ, ಕಾದಂಬರಿ ಪುಸ್ತಕಗಳು ಇವೆ. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಯಿದೆ. ಉಚಿತವಾಗಿ ಇಂಟರ್‌ನೆಟ್‌ ಬಳಸುವುದಕ್ಕೆ ಗ್ರಂಥಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ.

* * 

ಗ್ರಂಥಾಲಯದ ಎರಡನೇ ಮಹಡಿ ನಿರ್ಮಾಣಕ್ಕೆ ಎಚ್‌ಕೆಆರ್‌ಡಿಬಿಯಿಂದ ₹50 ಲಕ್ಷ ಅನುದಾನ ಮಂಜೂರಿ ಆಗಿದೆ. ಕಾಮಗಾರಿಯು ಬೇಗನೆ ಆರಂಭಗೊಳ್ಳುವ ನಿರೀಕ್ಷೆ ಇದೆ.
ಎಂ.ಎಸ್‌.ರೆಬಿನಾಳ
ಮುಖ್ಯ ಗ್ರಂಥಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.