ADVERTISEMENT

ರಾಯಚೂರು: ಆಗಸ್ಟ್‌ನಲ್ಲಿ ಕೋವಿಡ್‌ನಿಂದ 63 ಜನರ ಸಾವು

ಕೋವಿಡ್‌ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಹೆಚ್ಚಳ

ನಾಗರಾಜ ಚಿನಗುಂಡಿ
Published 12 ಸೆಪ್ಟೆಂಬರ್ 2020, 14:01 IST
Last Updated 12 ಸೆಪ್ಟೆಂಬರ್ 2020, 14:01 IST
ಆರ್‌.ವೆಂಕಟೇಶಕುಮಾರ್‌
ಆರ್‌.ವೆಂಕಟೇಶಕುಮಾರ್‌   

ರಾಯಚೂರು: ಕೊರೊನಾ ಸೋಂಕು ಸದ್ದಿಲ್ಲದೆ ಸಮುದಾಯ ಆವರಿಸಿಕೊಂಡಿದ್ದು, ತಿಂಗಳಿಂದ ತಿಂಗಳಿಗೆ ಸೋಂಕಿತರು ಮತ್ತು ಸಾಯುವವರ ಸಂಖ್ಯೆ ದ್ವಿಗುಣವಾಗುತ್ತಿದೆ!

ಜೂನ್‌ ಒಂದು ತಿಂಗಳಲ್ಲಿ 271 ಸೋಂಕಿತರು ಪತ್ತೆಯಾಗಿದ್ದರೆ, ಸೆಪ್ಟೆಂಬರ್‌ನಲ್ಲಿ ಒಂದೇ ದಿನದಲ್ಲಿ 200 ಕ್ಕಿಂತ ಅಧಿಕ ಜನರಿಗೆ ಕೋವಿಡ್‌ ಪತ್ತೆಯಾಗುತ್ತಿದೆ. ಕೋವಿಡ್‌ ಕಟ್ಟಿಹಾಕುವುದಕ್ಕೆ ಕೈಗೊಂಡ ಕ್ರಮಗಳೆಲ್ಲವೂ ಕ್ರಮೇಣ ಸಣ್ಣದಾಗುತ್ತಿವೆ. ಜಿಲ್ಲಾ ಕೇಂದ್ರದಲ್ಲಿ ಮಾತ್ರ ಕೋವಿಡ್‌ ರೋಗಿಗಳಿಗೆ ಈ ಮೊದಲು ಚಿಕಿತ್ಸೆ ನೀಡುತ್ತಿದ್ದ ವ್ಯವಸ್ಥೆಯನ್ನು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಲಾಗಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಯಚೂರಿನ ಮೂರು ಖಾಸಗಿ ಆಸ್ಪತ್ರೆಗಳಿಗೂ ಅನುಮತಿ ನೀಡಲಾಗಿದೆ.

ಜಿಲ್ಲೆಯಲ್ಲಿ ಲಭ್ಯವಿರುವ ಸರ್ಕಾರಿ ವೈದ್ಯಕೀಯ ಸೌಲಭ್ಯಗಳನ್ನೆಲ್ಲ ಕೋವಿಡ್‌ ರೋಗ ತಡೆಗಾಗಿ ಬಳಕೆ ಮಾಡಲಾಗುತ್ತಿದೆ. ಇದರೊಂದಿಗೆ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ಕೈಜೋಡಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯಕ್ಕೆ 1,633 ಸಕ್ರಿಯ ಪ್ರಕರಣಗಳಿದ್ದು, ರೋಗದ ಲಕ್ಷಣಗಳಿಲ್ಲದವರಿಗೆ ಹೋಂ ಕ್ವಾರಂಟೈನ್‌ ಮಾಡಲಾಗುತ್ತಿದೆ. ಉಸಿರಾಟ ತೊಂದರೆ ಇರುವವರನ್ನು ಮಾತ್ರ ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಕೋವಿಡ್‌ ದೃಢವಾದವರು ಕೋವಿಡ್‌ ಕೇರ್ ಸೆಂಟರ್‌ನಲ್ಲಿ ಉಳಿದುಕೊಳ್ಳಲು ಅವಕಾಶವಿದೆ. ಆದರೆ, ಬಹಳಷ್ಟು ಸೋಂಕಿತರು ಹೋಂ ಕ್ವಾರಂಟೈನ್‌ ಉಳಿದುಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ನೇರವಾಗಿ ಚಿಕಿತ್ಸೆಗೆ ಬರುವ ಹಿರಿಯ ನಾಗರಿಕರ ಸಂಖ್ಯೆ ದಿನದಿನಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಅದಕ್ಕೆ ತಕ್ಕಂತೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಸಿದ್ಧಪಡಿಸುವುದು ಸವಾಲಾಗಿದೆ.

ADVERTISEMENT

ಕಳೆದ ನಾಲ್ಕು ತಿಂಗಳುಗಳಿಂದ ಕೋವಿಡ್‌ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ವೈದ್ಯರು, ಸಿಬ್ಬಂದಿ ಹಾಗೂ ಅಧಿಕಾರಿಗಳು ಇದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಮತ್ತಷ್ಟು ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇಷ್ಟೊಂದು ಸಿಬ್ಬಂದಿ ಇದ್ದರೂ ರಿಮ್ಸ್‌, ಒಪೆಕ್‌ ಸೇರಿದಂತೆ ತಾಲ್ಲೂಕು ಕೇಂದ್ರಗಳ ಕೋವಿಡ್‌ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಇದೆ ಎನ್ನುವ ಆರೋಪ ಕೇಳಿ ಬರುತ್ತಿವೆ.

ಇತರೆ ರೋಗಗಳಿಂದ ಬಳಲುವ ಕೋವಿಡ್‌ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಆರೈಕೆಯ ಕೊರತೆ ಹಾಗೂ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಜನರು ಸಾಯುತ್ತಿದ್ದಾರೆ ಎಂದು ಕೋವಿಡ್‌ನಿಂದ ಮೃತಪಟ್ಟವರ ಸಂಬಂಧಿಗಳು ಆರೋಪಿಸುತ್ತಿದ್ದಾರೆ. ಯಾವುದೋ ರೋಗಕ್ಕೆ ಚಿಕಿತ್ಸೆ ಪಡೆಯಲು ಹೋಗಿ ಕೊರೊನಾ ಸೋಂಕಿನ ನರಕದಲ್ಲಿ ಸಿಲುಕಿದಂತಾಗಿದೆ. ಗಂಟಲು ದ್ರವ ಮಾದರಿ ವರದಿ ಬರುವವರೆಗೂ, ಬೇರೆ ರೋಗದಿಂದ ಬಳಲಿದರೂ ವೈದ್ಯರು ಚಿಕಿತ್ಸೆ ನೀಡುವುದಿಲ್ಲ ಎಂದು ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಸಂಬಂಧಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.