ಲಿಂಗಸುಗೂರು: ತಾಲ್ಲೂಕಿನ ಕೃಷ್ಣಾ ನದಿ ತೀರದ ಯಳಗುಂದಿ ಗ್ರಾಮದ ಬಳಿ ಕರಕಲಗಡ್ಡಿಯಲ್ಲಿ 11 ವರ್ಷದ ಬಾಲಕಿ ಜ್ವರದಿಂದ ಬಳಲುತ್ತಿದ್ದಾಳೆ. ಬಸವಸಾಗರ ಜಲಾಶಯದಿಂದ ಸೋಮವಾರ 1.06 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಸುತ್ತಿದ್ದರಿಂದ ಬಾಲಕಿ ಕುಟುಂಬಸ್ಥರು ಔಷಧಕ್ಕಾಗಿ ಪರದಾಡುವಂತಾಗಿದೆ.
ಕರಕಲಗಡ್ಡಿಯಲ್ಲಿ ಏಳು ಜನ ಉಳಿದುಕೊಂಡಿದ್ದು, ಕಳೆದ 25 ದಿನಗಳ ಹಿಂದೆ ಲಿಂಗಸುಗೂರಿಗೆ ಬಂದು ದಿನಸಿ ಸಾಮಗ್ರಿಗಳನ್ನು ಖರೀದಿಸಿಕೊಂಡು ಹೋಗಿದ್ದಾರೆ. ಈಗ ದಿನಸಿ ಖಾಲಿಯಾಗುತ್ತಿದೆ.
ಕರಕಲಗಡ್ಡಿಯಲ್ಲಿ ಅನಿತಾ ಎಂಬ ಬಾಲಕಿ ಕಳೆದ ಎರಡ್ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಾಳೆ. ಆದರೆ ಅವರಲ್ಲಿದ್ದ ಮಾತ್ರೆಗಳನ್ನು ತೆಗೆದುಕೊಂಡರೂ ಜ್ವರ ಕಡಿಮೆಯಾಗಿಲ್ಲ. ಈಗ ಔಷಧ ಇಲ್ಲದೆ ಬಾಲಕಿ ಮತ್ತಷ್ಟು ಪರದಾಡುವಂತಾಗಿದೆ. ರಭಸದಿಂದ ಹರಿಯುತ್ತಿರುವ ನದಿ ನೀರಲ್ಲಿ ತೆಪ್ಪ ಹಾಕಲು ಸಾಧ್ಯವಾಗದ ಕಾರಣ ನಡುಗಡ್ಡೆಯಲ್ಲಿ ಉಳಿದುಕೊಳ್ಳುವಂತಾಗಿದೆ. ನೀರಿನ ಮಟ್ಟ ಇದೇ ರೀತಿ ಮುಂದುವರಿದರೆ ನಮ್ಮ ಪರಿಸ್ಥಿತಿ ಗಂಭೀರವಾಗುತ್ತದೆ. ಆಹಾರ ಸಾಮಗ್ರಿ ಹಾಗೂ ಔಷಧಿಗಾಗಿ ಅಂಗಲಾಚುವಂತಾಗಿದೆ ಎಂದು ಕರಕಲಗಡ್ಡಿ ನಿವಾಸಿ ದ್ಯಾಮಣ್ಣ ಹೇಳುತ್ತಾರೆ.
ನಡುಗಡ್ಡೆಗೆ ತಲುಪದ ಔಷಧಿ: ಇದೇ ಪರಿಸ್ಥಿತಿ ಕಳೆದ ಎರಡ್ಮೂರು ವರ್ಷ ಹಿಂದೆ ಎದುರಾಗಿತ್ತು. ಆಗ ತಾಲ್ಲೂಕು ಆಡಳಿತ ಡ್ರೋನ್ ಮುಖಾಂತರ ಔಷಧ, ಮಾತ್ರೆಗಳನ್ನು ನಡುಗಡ್ಡೆಗೆ ತಲುಪಿಸಿತ್ತು. ಆದರೆ ಈಗ ಕಂದಾಯ ಅಧಿಕಾರಿಗಳು, ವೈದ್ಯರು ಯಳಗುಂದಿಯಲ್ಲಿರುವ ಕರಕಲಗಡ್ಡಿ ನಿವಾಸಿಗಳ ಸಂಬಂಧಿಕರ ಮನೆಗಳಿಗೆ ಔಷಧ ನೀಡಿ ಕರಕಲಗಡ್ಡಿಗೆ ತಲುಪಿಸುವಂತೆ ಹೇಳಿ ಕೈತೊಳೆದುಕೊಂಡಿದ್ದಾರೆ. ನಾವು ಔಷಧ ಹೇಗೆ ತಲುಪಿಸಬೇಕು. ಈ ನೀರಿನಲ್ಲಿ ತೆಪ್ಪ ಹಾಕಲು ಆಗುವುದಿಲ್ಲ. ಒಂದು ವೇಳೆ ತೆಪ್ಪ ಹಾಕಿದ್ದರೆ ಆ ಬಾಲಕಿಯನ್ನು ಇಲ್ಲಿಗೆ ಕರೆದುಕೊಂಡು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸುತ್ತಿದ್ದೆವು. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಪ್ರವಾಹ ಸಂತ್ರಸ್ಥರೊಂದಿಗೆ ಹುಡಗಾಟ ಆಡಬಾರದು. ತಾಲ್ಲೂಕು ಆಡಳಿತ ಡ್ರೋನ್ ಮೂಲಕ ಔಷಧ ತಲುಪಿಸುವ ವ್ಯವಸ್ಥೆ ಮಾಡಲು ದೊಡ್ಡ ಮನಸ್ಸು ಮಾಡಬೇಕು ಎಂದು ಆದಪ್ಪ ಯಳಗುಂದಿ ಹೇಳುತ್ತಾರೆ.
Quote - ಕರಕಲಗಡ್ಡಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಬಾಲಕಿಗೆ ಸೂಕ್ತ ಔಷಧ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುವುದು ಬಸವಣಪ್ಪ ಕಲಶೆಟ್ಟಿ ಉಪವಿಭಾಗಾಧಿಕಾರಿ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.