ರಾಯಚೂರು: ಮಹಾನಗರಪಾಲಿಕೆಯು ನಗರದ ಪ್ರಮುಖ ರಸ್ತೆಗಳ ಬದಿಯ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಹಾಗೂ ಬೀದಿ ಬದಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಸೋಮವಾರ ಧರಣಿ ನಡೆಸಿದರು.
ರಾಜ್ಯ ಹಾಗೂ ಹೆದ್ದಾರಿ ವಿಸ್ತರಣೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಬೀದಿ ವ್ಯಾಪಾರಿಗಳನ್ನು ಬೀದಿ ಪಾಲು ಮಾಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ ಅನುಚ್ಚೇದ 19(1)ಜೆ ಪ್ರಕಾರ ದೇಶದ ಪ್ರತಿಯೊಬ್ಬ ನಾಗರಿಕರಿಗೂ ವ್ಯಾಪಾರ ನಡೆಸುವ ಹಕ್ಕಿದೆ. ಆತ್ಮನಿರ್ಭರ ಯೋಜನೆ, ಕೌಶಲ ಅಭಿವೃದ್ಧಿ ಯೋಜನೆ ನಮ್ಮ ಬದುಕನ್ನು ಹಸನು ಮಾಡುವ ಬದಲು ನಮ್ಮ ನಾಶಕ್ಕೆ ಬಳಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳ ಶೆಡ್‌ಗಳನ್ನು ಜೆಸಿಬಿಯಿಂದ ಧ್ವಂಸ ಮಾಡಿ ನಮಗೆ ನಷ್ಟ ಉಂಟು ಮಾಡಿದ್ದಾರೆ. ವ್ಯಾಪಾರ ನಡೆಸಲು ಯಾವುದೇ ರೀತಿಯ ಅನುಕೂಲವಾಗದಂತೆ ಮಾಡಿದ್ದಾರೆ. ಜಿಲ್ಲಾಡಳಿತ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಗಂಗಾಧರ, ಅಮರೇಶ, ಪಾಷಾ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.