ADVERTISEMENT

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ: 'ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ‘

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ: ದಯಾನಂದ ಬೆಲೂರೆ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 6:52 IST
Last Updated 13 ಜೂನ್ 2022, 6:52 IST
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ ಬೆಲೂರೆ ಚಾಲನೆ ನೀಡಿದರು
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ ಬೆಲೂರೆ ಚಾಲನೆ ನೀಡಿದರು   

ರಾಯಚೂರು: ‘ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ ಬೆಲೂರೆ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಪೊಲೀಸ್, ಶಿಕ್ಷಣ, ಕಾರ್ಮಿಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೊಜನೆಯಿಂದ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳನ್ನು ಬಾಲ್ಯದಲ್ಲೇ ಕೆಲಸಕ್ಕೆ ಕಳುಹಿಸಿ ಭವಿಷ್ಯ ಹಾಳು ಮಾಡುವ ಬದಲು ಶಿಕ್ಷಣ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ. ಮಕ್ಕಳನ್ನು ಅನಿಷ್ಟ ಪದ್ಧತಿಯಿಂದ ಮುಕ್ತರನ್ನಾಗಿ ಮಾಡಿ ಮುಖ್ಯವಾಹಿನಿಗೆ ತರಬೇಕು. ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಬುಡ ಸಹಿತ ಕಿತ್ತೊಗೆಯಲು ಜನತೆ ಹಾಗೂ ವಿವಿಧ ಇಲಾಖೆಗಳ ಸಹಕಾರ ಅಗತ್ಯ ಎಂದು ಹೇಳಿದರು

ADVERTISEMENT

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಜಯಶ್ರೀ ಚನ್ನಾಳ ಮಾತನಾಡಿ,‘ಜಿಲ್ಲೆ ಯಲ್ಲಿ ಸಂಪೂರ್ಣವಾಗಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ವಿವಿಧ ಇಲಾಖೆಗಳು ಇನ್ನಷ್ಟು ಶ್ರಮವಹಿಸಬೇಕು’ ಎಂದರು.

ಉಪವಿಭಾಗಾಧಿಕಾರಿ ರಜನಿಕಾಂತ್ ಮಾತನಾಡಿ,‘ವರ್ಷ ಪೂರ್ತಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ನಂತರ ಜಿಲ್ಲಾಧಿಕಾರಿ ಕಚೇರಿಯಿಂದ ಜಾಗೃತ ಜಾಥಾ ಆರಂಭವಾಯಿತು. ಅದು ನಗರದ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ತಲುಪಿತು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಗಳಾ ಹೆಗಡೆ, ಹಿರಿಯ ಮಕ್ಕಳ ಕಲ್ಯಾಣಾಧಿಕಾರಿ ವೆಂಕಟೇಶ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಸುಂಬಡ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೆಂಕಟಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮನ್ಸೂರ್ ಅಹ್ಮದ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೃಷಭೇಂದ್ರಯ್ಯ ಸ್ವಾಮಿ, ಕಾರ್ಮಿಕ ನಿರೀಕ್ಷಕ ಎನ್.ವೆಂಕಟಪ್ಪ, ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ, ಮಕ್ಕಳ ಸಹಾಯವಾಣಿ ಸಂಯೋಜಕ ಸುದರ್ಶನ, ರೆಡ್‍ಕ್ರಾಸ್‍ ಸಂಸ್ಥೆಯ ಜಿಲ್ಲಾ ಸಂಚಾಲಕ ಡಾ.ದಂಡಪ್ಪ ಬಿರಾದಾರ ಹಾಗೂ ವಿವಿಧ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.