ADVERTISEMENT

ಕೃಷಿ ಅಭಿಯಾನ ರೈತ ಸ್ನೇಹಿ: ಶಾಸಕ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 13:22 IST
Last Updated 23 ನವೆಂಬರ್ 2019, 13:22 IST
ರಾಯಚೂರು ತಾಲ್ಲೂಕಿನ ಕಸ್ಬಾ ಕ್ಯಾಂಪ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕಲ್ಮಲಾ ಹಾಗೂ ರಾಯಚೂರು ಹೋಬಳಿಯ ಸಮಗ್ರ ಕೃಷಿ ಅಭಿಯಾನವನ್ನು ಶಾಸಕ ಬಸನಗೌಡ ದದ್ದಲ ಉದ್ಘಾಟಿಸಿದರು
ರಾಯಚೂರು ತಾಲ್ಲೂಕಿನ ಕಸ್ಬಾ ಕ್ಯಾಂಪ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕಲ್ಮಲಾ ಹಾಗೂ ರಾಯಚೂರು ಹೋಬಳಿಯ ಸಮಗ್ರ ಕೃಷಿ ಅಭಿಯಾನವನ್ನು ಶಾಸಕ ಬಸನಗೌಡ ದದ್ದಲ ಉದ್ಘಾಟಿಸಿದರು   

ರಾಯಚೂರು:ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವು ರೈತ ಸ್ನೇಹಿಯಾಗಿದ್ದು ಇಲಾಖೆಯ ಯೋಜನೆಗಳು, ತಾಂತ್ರಿಕ ಮಾಹಿತಿ, ಸಹಾಯಧನಗಳ ವಿವರವನ್ನು ಮನೆಬಾಗಿಲಿಗೆ ಮುಟ್ಟಿಸುವಲ್ಲಿ ಸಹಕಾರಿಯಾಗಿದೆ ಎಂದು ಶಾಸಕ ಬಸನಗೌಡ ದದ್ದಲ ಹೇಳಿದರು.

ತಾಲ್ಲೂಕಿನ ಕಸ್ಬಾ ಕ್ಯಾಂಪ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕಲ್ಮಲಾ ಹಾಗೂ ರಾಯಚೂರು ಹೋಬಳಿಯ ಸಮಗ್ರ ಕೃಷಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ವ್ಯಾಪಿಸಿದೆ. ಪ್ರಸ್ತುತ ಸಾಲಿನಲ್ಲಿ ನೆರೆ ಹಾಗೂ ಬರದ ಛಾಯೆ ಉಂಟಾಗಿದ್ದರೂ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಬೆಳೆಗಳು ಆಶಾದಾಯಕವಾಗಿವೆ ಎಂದರು.

ADVERTISEMENT

ಸಹಾಯಕ ಕೃಷಿ ನಿರ್ದೇಶಕ ಡಾ.ಆರ್.ಜಿ.ಸಂದೀಪ್ ಮಾತನಾಡಿ, ಫಸಲ್ ಭೀಮಾ ಯೋಜನೆಯಡಿ ರಾಯಚೂರು ತಾಲ್ಲೂಕಿನಲ್ಲಿ 2018–19ನೇ ಸಾಲಿನ ಮುಂಗಾರು ಹಂಗಾಮಿಗೆ ಸುಮಾರು 13,600 ರೈತರಿಗೆ ₹32.6 ಕೋಟಿ ರೂಪಾರಿ ಜಮೆಯಾಗಿದೆ. ಹಿಂಗಾರು ಹಂಗಾಮಿಗೆ ಇಲ್ಲಿವರೆಗೆ ಸುಮಾರು 2,800 ರೈತರಿಗೆ ₹2 ಕೋಟಿ ಜಮೆಯಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿ ಸಿದ್ದನಗೌಡ ಅವರು ಮಾತನಾಡಿ, ಕೃಷಿ ಕ್ಷೇತ್ರದ ರೈತರು ತುಂಬಾ ತೊಂದರೆಯಲ್ಲಿ ಸಿಲುಕಿಕೊಂಡಿದ್ದು ಹೊಸ ಹೊಸ ಯೋಜನೆಗಳ ಮೂಲಕ ಅವರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದರು.

ಕೃಷಿ ಇಲಾಖೆ ಸಿದ್ದಪಡಿಸಿದ ವಿವಿಧ ತಾಂತ್ರಿಕ ಮಾಹಿತಿಯನ್ನೊಳಗೊಂಡ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಆನಂತರ ರೈತ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರಜ್ಞ ಡಾ. ಜಿ.ಎಸ್. ಯಡಹಳ್ಳಿ ಮತ್ತು ಕೀಟ ವಿಜ್ಞಾನಿ ಡಾ. ಶ್ರೀವಾಣಿ ಜಿ.ಎನ್. ಅವರು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಳ್ಳಮ್ಮ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ನಾಗರಡ್ಡಿ , ನೇಹಾ ಕುಲಕರ್ಣಿ ಬಸವರಾಜ ಪಾಟೀಲ , ದೊಡ್ಡಮನಿ, ಮಧುಕಾಂತ, ಜಿ.ಗೋಪಾಲ್, ರವಿಶಂಕರ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಇದ್ದರು.

ರಾಯಚೂರು ಹಾಗೂ ಕಲ್ಮಲಾ ಹೋಬಳಿಯ ರೈತರು ಗ್ರಾಮ ಪಂಚಾಯತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಪ್ರಗತಿಪರ ರೈತರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.