ADVERTISEMENT

ಕಡಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 11:35 IST
Last Updated 23 ಫೆಬ್ರುವರಿ 2021, 11:35 IST
ರಾಯಚೂರು ಜಿಲ್ಲೆ ಜಿಲ್ಲೆಯ ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದಿಂದ ಸೋಮವಾರ ನಡೆದ ಕಡಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜಿ.ಎಸ್. ಯಡಹಳ್ಳಿ ಮಾತನಾಡಿದರು
ರಾಯಚೂರು ಜಿಲ್ಲೆ ಜಿಲ್ಲೆಯ ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದಿಂದ ಸೋಮವಾರ ನಡೆದ ಕಡಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜಿ.ಎಸ್. ಯಡಹಳ್ಳಿ ಮಾತನಾಡಿದರು   

ಜಕ್ಕಲದಿನ್ನಿ (ರಾಯಚೂರು): ರೈತರು ಪ್ರತಿವರ್ಷ ಉತ್ತಮ ಗುಣಮಟ್ಟದ ಬೀಜಗಳಿಗಾಗಿ ಪರಾವಲಂಬಿಯಾಗದೆ, ತಮ್ಮ ಕ್ಷೇತ್ರಗಳಲ್ಲಿ ಬೀಜೋತ್ಪಾದನೆ ಕೈಗೊಂಡು ಅವಶ್ಯವಿರುವ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಂಡಲ್ಲಿ ಆರ್ಥಿಕ ಸಬಲತೆ ಸಾಧ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜಿ.ಎಸ್. ಯಡಹಳ್ಳಿ ಹೇಳಿದರು.

ಜಿಲ್ಲೆಯ ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ, ಪ್ರಗತಿಪರ ರೈತ ಅಮರೇಶ ಅವರ ಕ್ಷೇತ್ರದಲ್ಲಿ ಸೋಮವಾರ ನಡೆದ ಕಡಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

ರಾಯಚೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಕ ಬೆಳೆ ಹಾಗೂ ವರ್ಷದಿಂದ ವರ್ಷಕ್ಕೆ ಸರದಿ ಬೆಳೆಯಾಗಿ ಭತ್ತ,ಹತ್ತಿ ,ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಮಳೆ ಅಭಾವದಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನೀರಿನ ಅಭಾವ ಕಂಡು ಬರುತ್ತಿದೆ. ರೈತರು, ತೊಗರಿ, ಜೋಳ ಮತ್ತು ಕಡಲೆ ಬೆಳೆಗಳನ್ನು ಬೆಳೆಯಲು ಶಿಫಾರಸು ಮಾಡಲಾಗಿದೆ. ಕಡಲೆ ಬೆಳೆಯ ಬಿಜಿಡಿ-103 ತಳಿಯನ್ನು ಆಯ್ಕೆ ಮಾಡಿ ಆಯ್ದ ರೈತರ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿತ್ತು. ಇದರ ವಿಶೇಷತೆ ಕುರಿತು ಅರಿವು ಮೂಡಿಸಲು ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಕೀಟಶಾಸ್ತ್ರ ವಿಜ್ಞಾನಿ ಡಾ. ಶ್ರೀವಾಣಿ ಜಿ.ಎನ್‌. ಮಾತನಾಡಿ, ಕಡಲೆ ಬೆಳೆಯಲ್ಲಿ ‘ಸಮಗ್ರ ಕೀಟ ನಿರ್ವಹಣೆ ಅಂಗವಾಗಿ ಬಿತ್ತನೆ ಪೂರ್ವದಲ್ಲಿ ಪ್ರತಿ ಕಿಲೋಗ್ರಾಂ ಬೀಜಕ್ಕೆ 4 ಗ್ರಾಂ ಟ್ರೈಕೋಡರ್ಮಾ ಬೀಜೋಪಚಾರ ಮಾಡಿಸಿ ಬಿತ್ತನೆ ಕೈಗೊಂಡಲ್ಲಿ ನೆಟೆರೋಗದ ನಿರ್ವಹಣೆ ಮಾಡಬಹುದಾಗಿದೆ. ಹಸಿರು ಕಾಯಿಕೊರಕದ ನಿರ್ವಹಣೆಗಾಗಿ ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ 200 ಗ್ರಾಂ ಸೂರ್ಯಕಾಂತಿ/ಜೋಳದ ಕಾಳು ಮಿಶ್ರಣ ಮಾಡಿ ಬಿತ್ತಿದಲ್ಲಿ ಪಕ್ಷಿಗಳು ಕೂರಲು ಆಶ್ರಯ ಸಸ್ಯಗಳಾಗಿ ಸಹಕಾರಿ ಆಗುತ್ತವೆ ಎಂದು ತಿಳಿಸಿದರು.

ಆಹಾರ ಮತ್ತು ಸಂಸ್ಕರಣಾ ತಂತ್ರಜ್ಞಾನ ವಿಜ್ಞಾನಿ ವೀಣಾ ಟಿ. ಅವರು, ಕಡಲೆಯನ್ನು ಮೌಲ್ಯ ವರ್ಧನೆಯ ಪದಾರ್ಥಗಳಾದ ಕಡಲೆ ಬೇಳೆ, ಕಡಲೆ ಪುಡಿ ಹಾಗೂ ಇನ್ನಿತರೆ ಕುರಕಲ ತಿಂಡಿಗಳ ಖಾದ್ಯಗಳ ಬಗ್ಗೆ ಮಾಹಿತಿ ನೀಡಿದರು. ಪ್ರಗತಿಪರ ರೈತ ಅಮರೇಶ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.