ADVERTISEMENT

ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಿ

ಮಾನ್ವಿ ತಾಲ್ಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಸವಪ್ರಭು ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:39 IST
Last Updated 1 ಮಾರ್ಚ್ 2026, 6:39 IST
ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ 11ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಹಾಪುರದ ಸಾಹಿತಿ ಸಿದ್ದರಾಮ ಹೊನ್ಕಲ್ ಉದ್ಘಾಟಿಸಿದರು
ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ 11ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಹಾಪುರದ ಸಾಹಿತಿ ಸಿದ್ದರಾಮ ಹೊನ್ಕಲ್ ಉದ್ಘಾಟಿಸಿದರು   

ನೀರಮಾನ್ವಿ (ಮಾನ್ವಿ): ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಕೇಂದ್ರ ಸರ್ಕಾರ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು’ ಎಂದು ಹಿರಿಯ ಸಾಹಿತಿ ಹಾಗೂ ವೈದ್ಯ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ಒತ್ತಾಯಿಸಿದರು.

ಶನಿವಾರ ತಾಲ್ಲೂಕಿನ ನೀರಮಾನ್ವಿ ಗ್ರಾಮದ ಸಿದ್ದಾರೂಢ ಮಠದ ಮೈದಾನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 11ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‌‘ತುಂಗಭದ್ರಾ ಎಡದಂಡೆ ನಾಲೆಯ ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ಹಾಗೂ ಅಸಮರ್ಪಕ ನೀರು ನಿರ್ವಹಣೆಯಿಂದ ಮಾನ್ವಿ ತಾಲ್ಲೂಕಿನ ಕೊನೆಭಾಗದ ಜಮೀನುಗಳಿಗೆ ಕಾಲುವೆ ನೀರು ತಲುಪದೆ ರೈತರಿಗೆ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರ ಕೃಷ್ಣಾ ನದಿಯಿಂದ ಏತ ನೀರಾವರಿ ಮೂಲಕ ತಾಲ್ಲೂಕಿನ ಟಿಎಲ್‌ಬಿಸಿ ನಂ.85, 81 ಮತ್ತಿತರ ವಿತರಣಾ ಕಾಲುವೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಬೇಕು. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಿ, ಎಡದಂಡೆ ನಾಲೆಯ ಕೊನೆಭಾಗದ ರೈತರಿಗೆ ನೀರು ಸಿಗುವಂತೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಇಂದಿನ ಯುವಕರಲ್ಲಿ ಸಾಹಿತ್ಯ ರಚನೆಗೆ ಒಲವು ಹೆಚ್ಚಾಗಿದೆ. ಆದರೆ ದಿಢೀರನೆ ಪ್ರಸಿದ್ಧರಾಗಬೇಕು ಎನ್ನುವ ಮನೋಭಾವ ತೊರೆದು ಹಿರಿಯರು ರಚಿಸಿದ ಕತೆ, ಕವನ, ಕಾದಂಬರಿ, ನಾಟಕಗಳನ್ನು ಓದಬೇಕು. ಅಧ್ಯಯನಶೀಲತೆ ಮೈಗೂಡಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

‘ಸರ್ಕಾರವೇ ಇಂಗ್ಲೀಷ್ ಮಾಧ್ಯಮ ಕಾಲೆ ಆರಂಭಕ್ಕೆ ಮುಂದಾಗಬಾರದು. ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿನ ಭೋದನಾ ಗುಣಮಟ್ಟ ಕನ್ನಡ ಮಾಧ್ಯಮದಲ್ಲಿ ಅಳವಡಿಸಿಕೊಂಡರೆ ಪಾಲಕರು ಹೆಚ್ಚು ಮಾತೃ ಭಾಷಾ ಶಿಕ್ಷಣಕ್ಕೆ ಆಸಕ್ತಿ ತೋರುತ್ತಾರೆ.ಅದರೆ ಕನ್ನಡ ಶಾಲೆಗಿಂತ ಇಂಗ್ಲೀಷ್ ಶಾಲೆಗಳು ಹೆಚ್ಚು ಆಕರ್ಷಿಸುತ್ತಿರುವುದು ವಿಷಾದನೀಯ’ ಎಂದರು.

‌ಸಮ್ಮೇಳನ ಉದ್ಘಾಟಿಸಿದ ಶಹಾಪುರದ ಸಾಹಿತಿ ಸಿದ್ದರಾಮ ಹೊನ್ಕಲ್ ಮಾತನಾಡಿ, ‌‘ಬರಹಗಾರರಿಗೆ ಸಾಮಾಜಿಕ ಕಳಕಳಿ ಹಾಗೂ ಸಾಹಿತ್ಯದ ಮೂಲಕ ನೊಂದವರಿಗೆ ಧ್ವನಿಯಾಗುವ, ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ಧೋರಣೆ ಇರಬೇಕು. ಅಂತಹ ಸಾಹಿತ್ಯ ಬಹುಕಾಲ ಉಳಿಯುತ್ತದೆ.
ಇಲ್ಲಿನ ಹಲವು ಮಹತ್ವದ ಕತೆಗಾರರಿಂದಾಗಿ ರಾಯಚೂರು ಜಿಲ್ಲೆಗೆ ಕನ್ನಡ ಕಥಾ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವಿದೆ’ ಎಂದರು.

ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ‘ನಾಡಿನ ನೆಲ, ಜಲ ಹಾಗೂ ಭಾಷೆಯ ಸಂರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರ. ಗಡಿಭಾಗದಲ್ಲಿರುವ ನಮ್ಮ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರಮೇಶಬಾಬು ಯಾಳಗಿ, ಶಾಸಕ ಜಿ.ಹಂಪಯ್ಯ ನಾಯಕ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿದರು.

ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಫಾದರ್ ಸುರೇಶ ವಿನ್ಸೆಂಟ್, ಮೌಲಾನಾ ಮುಫ್ತಿ ಸೈಯದ್ ಜಿಶಾನ್ ಹಸನ್ ಖಾದ್ರಿ ಹಾಗೂ ದೇವೇಂದ್ರಪ್ಪ ತಾತ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಶಾಸಕರಾದ ಗಂಗಾಧರ ನಾಯಕ ಹಾಗೂ ಬಸನಗೌಡ ಬ್ಯಾಗವಾಟ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ನಯೋಪ್ರಾ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಮುಖಂಡರಾದ ಸಿದ್ದರಾಮಪ್ಪ ನೀರಮಾನ್ವಿ, ಎ.ಬಾಲಸ್ವಾಮಿ ಕೊಡ್ಲಿ, ದೊಡ್ಡಬಸಪ್ಪಗೌಡ ಭೋಗಾವತಿ, ಜಿ.ಶಿವರಾಜ ನಾಯಕ ಬಲ್ಲಟಗಿ, ರಾಜಾ ಸುಭಾಷ್ ಚಂದ್ರ ನಾಯಕ, ಮಲ್ಲಿಕಾರ್ಜುನ ಪೋತ್ನಾಳ, ಪಂಪನಗೌಡ ನೀರಮಾನ್ವಿ, ಅರಕೇರಿ ರಾಮಣ್ಣ, ಶ್ರೀರಾಮುಲು, ಎಚ್.ಮೌನೇಶಗೌಡ, ಕಸಾಪ ಜಿಲ್ಲಾ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ, ತಾಲ್ಲೂಕು ಅಧ್ಯಕ್ಷ ಶರಣಬಸವ ನೀರಮಾನ್ವಿ, ಇತರ ಪದಾಧಿಕಾರಿಗಳಾದ ತಾಯಪ್ಪ ಬಿ.ಹೊಸೂರು, ಎಚ್.ಶರ್ಪುದ್ದೀನ್ ಪೋತ್ನಾಳ, ಲಕ್ಷ್ಮಣ ಜಾನೇಕಲ್, ಹನುಮಂತ ಕೊಟ್ನೆಕಲ್, ಕೆ.ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ಶನಿವಾರ ನಾಡದೇವಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಶಾಸಕ ಜಿ.ಹಂಪಯ್ಯ ನಾಯಕ ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.