ADVERTISEMENT

ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 20:30 IST
Last Updated 11 ಮಾರ್ಚ್ 2020, 20:30 IST
ವೇತನ ಹೆಚ್ಚಳ ಮತ್ತಿತರೆ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಬಿಸಿಯೂಟ ರಾಯಚೂರು ತಾಲ್ಲುಕು ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು
ವೇತನ ಹೆಚ್ಚಳ ಮತ್ತಿತರೆ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಬಿಸಿಯೂಟ ರಾಯಚೂರು ತಾಲ್ಲುಕು ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಬಿಸಿಯೂಟ ನೌಕರರ ವೇತನ ಹೆಚ್ಚಳ ಮಾಡಬೇಕು. ಡಿ. ಗ್ರೂಪ್ ನೌಕರರೆಂದು ಪರಿಗಣಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ತಾಲ್ಲೂಕು ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಮುಖ್ಯಮಂತ್ರಿ ಮಂಡಿಸಿದ ಬಜೆಟ್‌ನಲ್ಲಿ ಬಿಸಿಯೂಟ ನೌಕರರ ವೇತನದ ಬಗ್ಗೆ ಯಾವುದೇ ಪ್ರಸ್ತಾವನೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದು ಖಂಡನೀಯ. ಆ ಮೂಲಕ ಬಿಸಿಯೂಟ ನೌಕರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಅನ್ಯಾಯವೆಸಗಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹೋರಾಟ ನಡೆದಿದ್ದು, ಆ ಸಂದರ್ಭದಲ್ಲಿ ಸಿ.ಎಂ. ರಾಜ್ಯ ಮುಖಂಡರೊಂದಿಗೆ ಮಾತುಕತೆ ನಡೆಸಿ ವೇತನ ಹೆಚ್ಚಳ ಹಾಗೂ ಇತರೆ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದರು. ಈಗ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ರಾಜ್ಯದ ಶಾಲಾ ಮಕ್ಕಳ ಅಪೌಷ್ಟಿಕತೆ ಮತ್ತು ಹಾಜರಾತಿ ಹೆಚ್ಚಳಕ್ಕಾಗಿ ದುಡಿಯುತ್ತಿರುವ ಬಿಸಿಯೂಟ ಮಹಿಳೆಯರಿಗೆ ಕೇವಲ ₹2,600 ರಿಂದ ₹2,700 ತಿಂಗಳ ಸಂಬಳ ಬಿಟ್ಟರೆ ಬೇರೆ ಯಾವ ಸೌಲಭ್ಯಗಳು ಇಲ್ಲ. ಬೆಲೆ ಏರಿಕೆಯ ಮಧ್ಯೆ ಈ ವೇತನ ಯಾವುದಕ್ಕೆ ಸಾಲುವುದಿಲ್ಲ. ಪ್ರತಿ ಶಾಲೆಯಲ್ಲಿ ಕನಿಷ್ಠ 150 ರಿಂದ 600 ವರೆಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಿತ್ಯ ಅಡುಗೆ ಮಾಡುವ ಕಾರ್ಯ ಸಾಮಾನ್ಯದಂತೆ ಭಾವಿಸಿ ನಿರ್ಲಕ್ಷ್ಯ ವಹಿಸಿದೆ. ಜೊತೆಗೆ ಈ ಯೋಜನೆಯನ್ನು ಖಾಸಗಿಯವರಿಗೆ ಕೊಡುವ ಮೂಲಕ ಈ ಮಹಿಳೆಯರನ್ನು ನಿರುದ್ಯೋಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ಬಿಸಿಯೂಟ ನೌಕರರ ಹಾಜರಾತಿ ನೆಪವೊಡ್ಡಿ ಕೆಲಸದಿಂದ ಕೈಬಿಡಬಾರದು. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಪೂರಕವಾಗಿರುವ ಈ ಯೋಜನೆಯನ್ನು ಖಾಸಗಿಯವರಿಗೆ ನೀಡಬಾರದು. ಸೇವಾ ನಿಯಮಾವಳಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಗೌರವಾಧ್ಯಕ್ಷ ಡಿಎಸ್.ಶರಣಬಸವ, ಅಧ್ಯಕ್ಷೆ ನಾಗಮ್ಮ, ಅಕ್ಕ ಮಹಾದೇವಿ, ಕಲ್ಯಾಣಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.