ADVERTISEMENT

ಲಿಂಗಸುಗೂರು: ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ಅಲೆಮಾರಿ ಸಮುದಾಯದವರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 7:18 IST
Last Updated 17 ಅಕ್ಟೋಬರ್ 2025, 7:18 IST
<div class="paragraphs"><p>ಲಿಂಗಸುಗೂರು ಉಪವಿಭಾಗಾಧಿಕಾರಿ ಕಚೇರಿ ಎದುರು ಅಲೆಮಾರಿ ಸಮುದಾಯದವರು ಪ್ರತಿಭಟನೆ ನಡೆಸಿದರು.</p></div>

ಲಿಂಗಸುಗೂರು ಉಪವಿಭಾಗಾಧಿಕಾರಿ ಕಚೇರಿ ಎದುರು ಅಲೆಮಾರಿ ಸಮುದಾಯದವರು ಪ್ರತಿಭಟನೆ ನಡೆಸಿದರು.

   

ಲಿಂಗಸುಗೂರು: ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ 1ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟದಿಂದ ಪಟ್ಟಣದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಗಡಿಯಾರ ವೃತ್ತದಿಂದ ಆರಂಭವಾದ ಬೃಹತ್ ಪ್ರತಿಭಟನೆ ಮೆರವಣಿಗೆ ಬಸ್ ನಿಲ್ದಾಣ ವೃತ್ತದ ಮೂಲಕ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಅಲೆಮಾರಿ ಸಮುದಾಯಗಳು ತಮ್ಮ ಕುಲ ಕಸುಬುನೊಂದಿಗೆ ಹಾಗೂ ವೇಷಗಾರರು ತಮ್ಮ ವೇಷಭೂಷಣದೊಂದಿಗೆ ಭಾಗವಹಿಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಲೆಮಾರಿ ಸಾಮ್ರಾಜ್ಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಸುಭಾಷ ಚವಾಣ್‌ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳು ಗತಿಸಿದರೂ, 49 ಅಲೆಮಾರಿ ಸಮುದಾಯಗಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಈಗಲೂ ಅಲೆಮಾರಿಗಳು ಗುಡಿಸಲು, ಟೆಂಟ್‌, ಜೋಪಡಿಗಳಲ್ಲಿ ಸೌಕರ್ಯವಿಲ್ಲದೆ ಬದುಕುತ್ತಿದ್ದಾರೆ. ಅಲೆಮಾರಿಗಳು ಇಂದಿಗೂ ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸಿದ್ಧರಾಮಯ್ಯ ಸರ್ಕಾರ ಮತ್ತೇ ಅನ್ಯಾಯ ಮಾಡಿದೆ. ಅನ್ಯಾಯ ಸರಿಪಡಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು. ನ್ಯಾ.ಎಚ್‌.ಎನ್‌.ನಾಗಮೋಹನ್‌ದಾಸ್‌ ಆಯೋಗವು ಅಲೆಮಾರಿಗಳಿಗೆ ಪ್ರತ್ಯೇಕ ಶೇ 1ರಷ್ಟು ಮೀಸಲಾತಿ ಶಿಫಾರಸು ಮಾಡಿದೆ. ಆದರೆ, ಆಯೋಗದ ಶಿಫಾರಸು ಮೂಲೆಗುಂಪು ಮಾಡಿ ಮುಖ್ಯಮಂತ್ರಿ ಅಧ್ಯಕ್ಷತೆಯ ಸಚಿವ ಸಂಪುಟದಲ್ಲಿ ಶೇ 1ರಷ್ಟು ಮೀಸಲಾತಿಯನ್ನು ಬಲಾಢ್ಯ ಸಮುದಾಯಗಳ ಜತೆಗೆ ಸಿ ಗ್ರೂಪ್‍ನಲ್ಲಿ ಸೇರಿಸುವ ನಿರ್ಣಯ ಅಲೆಮಾರಿ ಸಮುದಾಯಕ್ಕೆ ಮರಣ ಶಾಸನ ಬರೆದು ಬಿಟ್ಟಿದೆ. ಅದನ್ನು ಪ್ರತ್ಯೇಕಿಸಿ ಅಸ್ಪೃಶ್ಯ ಸಂಬಂಧಿತ ಅಲೆಮಾರಿಗಳಿಗೆ ವಿಶೇಷವಾಗಿ ಶೇ 1ರಷ್ಟು ಮೀಸಲಾತಿ ನೀಡಬೇಕು. ಇಲ್ಲವೇ ಭಿಕ್ಷಾಟನೆಗೆ ಅನುಮತಿ ನೀಡುಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬುಡ್ಗಜಂಗಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕೊಡಗುಂಟಿ, ಶಿಳ್ಳೆಕ್ಯಾತ ಸಮಾಜದ ಶಿವರಾಜ ಕಟ್ಟಿಮನಿ, ಸುಡಗಾಡುಸಿದ್ಧ ಸಮಾಜದ ರಾಮಚಂದ್ರಪ್ಪ, ಡಕ್ಕಲಿಗ ಸಮಾಜದ ಸುರೇಶ ಕಟ್ಟಿಮನಿ, ಪಂಪಣ್ಣ ಹಿಪ್ಕೊಳಿ, ಭರಮಣ್ಣ ಕಸಕಸಿ, ಪರಶುರಾಮ ಕಟ್ಟಿಮನಿ, ರಮೇಶ ಮೋತಿ, ಉಮೇಶ ಮೋತಿ, ದುರಗಪ್ಪ, ರಾಘವೇಂದ್ರ ಚೆನ್ನದಾಸರ, ಶಿವರೆಡ್ಡಿ ಕುಮಾರಿ, ಬಸವರಾಜ ಮೋತಿ, ಮಲ್ಲೇಶ ಪರಿಯೂರ್, ರವಿಚಂದ್ರನ ಹುನಕುಂಟಿ, ಮಂಗಳಪ್ಪ ಹೊಸಮನಿ, ಪರಶುರಾಮ ಜಮಖಂಡಿ, ಕರಿಯಪ್ಪ ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.