ADVERTISEMENT

ರೈತರ ಸಂಭ್ರಮ ಹೆಚ್ಚಿಸುವ ಮಣ್ಣೆತ್ತಿನ ಅಮಾವಾಸ್ಯೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 11:38 IST
Last Updated 28 ಜೂನ್ 2022, 11:38 IST
ಶಕ್ತಿನಗರದಲ್ಲಿ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಾಂಪ್ರದಾಯಿಕ ಹಬ್ಬ ಮಣ್ಣೆತ್ತಿನ ಅಮವಾಸ್ಯೆ
ಶಕ್ತಿನಗರದಲ್ಲಿ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಾಂಪ್ರದಾಯಿಕ ಹಬ್ಬ ಮಣ್ಣೆತ್ತಿನ ಅಮವಾಸ್ಯೆ   

ಶಕ್ತಿನಗರ: ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಾಂಪ್ರದಾಯಿಕ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ. ಇದು ಮುಂಗಾರಿನ ಆರಂಭದ ಹಬ್ಬ ಕೂಡ ಹೌದು. ರೈತರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮಪಡುವ ಈ ಹಬ್ಬ ಕಾರಹುಣ್ಣಿಮೆಯ ನಂತರ ಬರುತ್ತದೆ.

ಕೆಲವರು ಎತ್ತುಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಊರ ಕುಂಬಾರರ ಮನೆಗಳಿಂದ ತರುತ್ತಾರೆ.

ಎತ್ತುಗಳನ್ನು ದೇವರ ಜಗುಲಿ ಮೇಲಿಟ್ಟು ಪೂಜೆ ಮಾಡುತ್ತಾರೆ. ಮಣ್ಣೆತ್ತುಗಳನ್ನು ಪೂಜಿಸಿ ಕಾಯಿ–ಕರ್ಪೂರ, ಲೋಬಾನ, ಆರತಿ ಮಾಡಿ ವಿವಿಧ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡಿ ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ.

ADVERTISEMENT

ಸಂಜೆ ವೇಳೆಗೆ ಹೊಳೆ, ಕೆರೆ ದಡಕ್ಕೆ ತೆರಳಿ ಮಣ್ಣೆತ್ತುಗಳ ಮುಖ ತೊಳೆದು ವಿಭೂತಿ–ಕುಂಕುಮ ಹಚ್ಚಿ ಆರತಿ ಬೆಳಗಿ, ಮಳೆ ಬೆಳೆ ಸಮೃದ್ಧಿಗೆ ಬೇಡಿಕೊಂಡು ಎತ್ತುಗಳನ್ನು ನೀರಿಗೆ ಬಿಡುವುದು ಪೂರ್ವಜರ ಕಾಲದಿಂದಲೂ ನಡೆದು ಬಂದಿದೆ.

‘ಪೂರ್ವಜರ ಕಾಲದಿಂದಲೂ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಿಕೊಂಡು ಬಂದಿದ್ದೇವೆ. ಇದರಿಂದ ಭೂಮಿ ಮತ್ತು ರೈತನಿಗೆ ಬಲ ಬರುತ್ತದೆ. ಎತ್ತುಗಳನ್ನೂ ಗೌರವಿಸಿದಂತೆ ಆಗುತ್ತದೆ’ ಎನ್ನುತ್ತಾರೆ ಶಕ್ತಿನಗರದ ಶಾಂತಾ.

ಮರುದಿನ ಮಕ್ಕಳು ಎತ್ತುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಎತ್ತಿನ ಕಾಲು ಮುರಿದು ತಟ್ಟೆಯಲ್ಲಿಟ್ಟುಕೊಂಡು ಮನೆ ಮನೆಗೆ ತೆರಳಿ ಎಂಟತ್ತಿನ್ಯಾಗ ಒಂದ ಕುಂಟೆತ್ತ ಬಂದೈತಿ ಜ್ವಾಳಾ ನೀಡಿರಿ ಎಂದು ತಿರುಗುತ್ತಾರೆ. ಮನೆಯವರು ಜೋಳ, ಗೋಧಿ, ಸಜ್ಜೆ , ಅಕ್ಕಿ ಹಾಗೂ ಹಣ ನೀಡಿ ಕಳುಹಿಸುತ್ತಾರೆ.

ಸಂಗ್ರಹಿಸಿದ ದವಸ ಧಾನ್ಯಗಳನ್ನು ಊರ ಅಂಗಡಿಗೆ ಹಾಕಿ ಪಂಚ ಪಳಾರ, ಊದಬತ್ತಿ, ಕುಂಕುಮ, ವಿಭೂತಿ, ತೆಂಗಿನಕಾಯಿ, ಬೆಲ್ಲ, ಚುರುಮುರಿ ಖರೀದಿಸುತ್ತಾರೆ. ಎತ್ತುಗಳನ್ನು ತೆಗೆದುಕೊಂಡು ಹೊಳೆ, ಕೆರೆ, ಹಳ್ಳದ ದಡಕ್ಕೆ ತೆರಳಿ ಪೂಜೆ ಮಾಡಿ ಬಿಡುತ್ತಾರೆ. ನಂತರ ದಾರಿಯಲ್ಲಿ ಸಿಕ್ಕವರಿಗೆ ಪಳಾರು ಹಂಚುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.