ರಾಯಚೂರು: ‘ಓದಿನಿಂದ ಮನುಷ್ಯ ಎತ್ತರಕ್ಕೆ ಏರಬಲ್ಲ ಎಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ, ಜ್ಞಾನದ ಪ್ರತೀಕ ಆಗಿದ್ದವರು ಡಾ. ಬಿ.ಆರ್.ಅಂಬೇಡ್ಕರ್’ ಎಂದು ಸಾಹಿತಿ ಈರಣ್ಣ ಬೆಂಗಾಲಿ ಅಭಿಪ್ರಾಯಪಟ್ಟರು.
ಇಲ್ಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್ 134 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಗತ್ತು ಕಂಡ ಶ್ರೇಷ್ಠ ಜ್ಞಾನಿ ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶ್ವಸಂಸ್ಥೆಯು ಜ್ಞಾನದ ದಿನಾಚರಣೆಯನ್ನಾಗಿ ಘೋಷಿಸಿದೆ. ಇಡೀ ವಿಶ್ವವೇ ಇದನ್ನು ಆಚರಿಸುತ್ತದೆ. ಇದು ಭಾರತದ ಹೆಮ್ಮೆ. ಸಂವಿಧಾನದ ಶಿಲ್ಪಿಯಾಗಿ ಈ ನೆಲದ ಶೋಷಿತರಿಗೆ, ಹೆಣ್ಣುಮಕ್ಕಳಿಗೆ, ಕಾರ್ಮಿಕರಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿದ್ದು ದುರುಂತ’ ಎಂದು ಬೇಸರ ವ್ಯಕ್ತಪಡಿಸಿದರು.
‘ಇಂದಿನ ಯುವಪೀಳಿಗೆ ಅಂಬೇಡ್ಕರ್ ಅವರ ಅಪರಿಮಿತ ಓದು, ಜ್ಞಾನ, ಪಡೆದ ಪದವಿಗಳು ಮಾದರಿಯಾಗಬೇಕಿದೆ’ ಎಂದು ಹೇಳಿದರು.
ವಿಭಾಗೀಯ ನಿಯಂತ್ರಣ ಅಧಿಕಾರಿ ಎಂ.ಎಸ್. ಚಂದ್ರಶೇಖರ ಮಾತನಾಡಿ, ‘ಅಂಬೇಡ್ಕರ್ ಜಯಂತಿಯ ಆಚರಣೆಯ ಹಿನ್ನೆಲೆ ಅರಿಯಬೇಕಿದೆ. ಅವರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕಿದೆ. ಅದರಲ್ಲೂ ಮೊಬೈಲ್ ಬಿಟ್ಟು ಪುಸ್ತಕ ಓದಬೇಕಿದೆ. ಅಂಬೇಡ್ಕರ್ ಅವರ ಹೋರಾಟದ ಮನೋಭಾವ ನಾವೆಲ್ಲರೂ ತಿಳಿಯಬೇಕಿದೆ’ ಎಂದರು.
ಅಶ್ರಫ್ ಅಲಿ, ಕೆ.ಎಲ್. ಚಂದ್ರಶೇಖರ, ಸುನಿತಾ ಪತ್ತಾರ, ಅಣ್ಣಪ್ಪ, ಶಾಂತಮೂರ್ತಿ, ಮುದ್ದುಕೃಷ್ಣ, ಚಿನ್ನಕಾಶಿಂ, ಗುರುನಾಥ ರೆಡ್ಡಿ, ಸಂಗಣ್ಣ ಹಾಜರಿದ್ದರು. ಮಹಾಂತೇಶ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.