ADVERTISEMENT

ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಅಂಬೇಡ್ಕರ್ ಜಯಂತಿ ಆಚರಣೆ ಗೊಂದಲ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 13:04 IST
Last Updated 14 ಏಪ್ರಿಲ್ 2021, 13:04 IST
ಮಾನ್ವಿಯಲ್ಲಿ ಬುಧವಾರ ರಸ್ತೆಯ ಮೇಲೆ ಮಲಗಿ ಪ್ರತಿಭಟಿಸಿದ ಪ್ರಭುರಾಜ ಕೊಡ್ಲಿ ಅವರನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ, ಪೊಲೀಸ್ ಅಧಿಕಾರಿಗಳು ಮನವೊಲಿಸಿದರು
ಮಾನ್ವಿಯಲ್ಲಿ ಬುಧವಾರ ರಸ್ತೆಯ ಮೇಲೆ ಮಲಗಿ ಪ್ರತಿಭಟಿಸಿದ ಪ್ರಭುರಾಜ ಕೊಡ್ಲಿ ಅವರನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ, ಪೊಲೀಸ್ ಅಧಿಕಾರಿಗಳು ಮನವೊಲಿಸಿದರು   

ಮಾನ್ವಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಗೊಂದಲದ ತೀರ್ಮಾನ ಖಂಡಿಸಿ ದಲಿತಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ಮಾಡಿದ ಘಟನೆ ಬುಧವಾರ ಪಟ್ಟಣದಲ್ಲಿ ನಡೆಯಿತು.

ಜಯಂತಿ ಆಚರಣೆ ಕುರಿತು ನಡೆದಿದ್ದ ತಾಲ್ಲೂಕು ಆಡಳಿತದ ಪೂರ್ವಭಾವಿ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಬುಧವಾರ ಬಾಬು ಜಗಜೀವನರಾಂ ಭಾವಚಿತ್ರ ಇಲ್ಲದೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆಗೆ ಮಾತ್ರ ಅಧಿಕಾರಿಗಳು ಮುಂದಾಗಿರುವುದನ್ನು ಖಂಡಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡ ಪ್ರಭುರಾಜ ಕೊಡ್ಲಿ ಬೆಂಬಲಿಗರ ಜತೆ ಪ್ರತಿಭಟನೆ ನಡೆಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅವರು ಕೆಲಹೊತ್ತು ರಸ್ತೆಯ ಮೇಲೆ ಮಲಗಿ ಪ್ರತಿಭಟನೆ ನಡೆಸಿದರು.

ADVERTISEMENT

ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಭುರಾಜ ಕೊಡ್ಲಿ ಅವರ ಮನವೊಲಿಕೆಗೆ ಪ್ರಯತ್ನಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಖಂಡ ಎ.ಬಾಲಸ್ವಾಮಿ ಕೊಡ್ಲಿ ಮತ್ತಿತರರು ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ಜತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ತಹಶೀಲ್ದಾರ್ ಕಚೇರಿ ಆವರಣದ ವೇದಿಕೆಯಲ್ಲಿ ನಡೆಯಬೇಕಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ವಿಳಂಬವಾಯಿತು. ತಹಶೀಲ್ದಾರ್ ಮಹೇಶಕುಮಾರ ಅವರ ತಾರತಮ್ಯ ಧೋರಣೆ ಖಂಡಿಸಿ ಮತ್ತೊಂದು ಗುಂಪಿನ ಮುಖಂಡ ಪಿ.ತಿಪ್ಪಣ್ಣ ಬಾಗಲವಾಡ ಮತ್ತಿತರರು ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.