ADVERTISEMENT

ಮಾನ್ವಿ | ಅಮೃತ ಯೋಜನೆ ನಿಧಾನ: ಅಸಮಾಧಾನ

ಮಾನ್ವಿ: ₹61 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಕೆ ಗುರಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:17 IST
Last Updated 19 ನವೆಂಬರ್ 2025, 6:17 IST
ಮಾನ್ವಿ ಪಟ್ಟಣದ 14ನೇ ವಾರ್ಡ್‌ನಲ್ಲಿ ಅಪೂರ್ಣಗೊಂಡಿರುವ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿ
ಮಾನ್ವಿ ಪಟ್ಟಣದ 14ನೇ ವಾರ್ಡ್‌ನಲ್ಲಿ ಅಪೂರ್ಣಗೊಂಡಿರುವ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿ   

ಮಾನ್ವಿ: ಪಟ್ಟಣದಲ್ಲಿ 8 ತಿಂಗಳ ಹಿಂದೆ ಚಾಲನೆ ನೀಡಲಾಗಿದ್ದ ಅಮೃತ-2 ಯೋಜನೆಯ ಕುಡಿಯುವ ನೀರಿನ ಕಾಮಗಾರಿ ನಿರೀಕ್ಷಿತ ಪ್ರಗತಿ ಸಾಧಿಸದೆ ಆಮೆಗತಿಯಲ್ಲಿ
ಸಾಗುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರ ಪುರಸ್ಕೃತ ಅಮೃತ-2 ಯೋಜನೆ ಅಡಿಯಲ್ಲಿ ₹61 ಕೋಟಿ ವೆಚ್ಚದಲ್ಲಿ ಕಾತರಕಿ ಬಳಿ ತುಂಗಭದ್ರಾ ನದಿಗೆ ಹೊಂದಿಕೊಂಡು ಇರುವ ಜಾಕ್‌ವೆಲ್‌ನಿಂದ ರಬ್ಬಣಕಲ್ ಕೆರೆಯವರೆಗೆ ಪೈಪ್‌ಲೈನ್ ವ್ಯವಸ್ಥೆ, ರಬ್ಬಣಕಲ್ ಕೆರೆ ಹತ್ತಿರ 45 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಜಲ ಶುದ್ದೀಕರಣ ಘಟಕ ನಿರ್ಮಾಣ, ಪಟ್ಟಣದ ಎರಡು ಕಡೆ 15 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ, ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಹೊಸ ಪೈಪ್‌ಲೈನ್‌ಗಳ ಅಳವಡಿಕೆ ಹಾಗೂ ಪ್ರತಿ ಮನೆಗೆ ನಳಗಳ ಸಂಪರ್ಕಕ್ಕೆ ಮಂಜೂರಾತಿ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಮೊದಲ ಹಂತದಲ್ಲಿ ಮಾರ್ಚ್ 30ರಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ₹55.53 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಹಾಗೂ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಚಾಲನೆ ನೀಡಿದ್ದರು.

ADVERTISEMENT

ಕಾಮಗಾರಿ ಅಡಿಯಲ್ಲಿ ಪಟ್ಟಣದ 10ಕ್ಕೂ ಅಧಿಕ ವಾರ್ಡ್‌ಗಳಲ್ಲಿ ರಸ್ತೆ ಪಕ್ಕ ಮತ್ತು ಮಧ್ಯಭಾಗದ ಸ್ಥಳ ಅಗೆದು ಪೈಪ್‌ಗಳನ್ನು ಅಳವಡಿಸಲಾಗಿದೆ. ಆದರೆ, ಕೆಲವು ಕಡೆ ಪೈಪ್ ಗಳನ್ನು ಅಳವಡಿಸದೆ ರಸ್ತೆ ಮಧ್ಯೆ ಹಾಗೂ ಪಕ್ಕದಲ್ಲಿ ಅಗೆದ ಗುಂಡಿಗಳನ್ನು ಮುಚ್ಚಲಾಗಿದೆ.

ಅನೇಕ ಕಡೆ ಮನೆಗಳಿಗೆ ನಳಗಳ ಸಂಪರ್ಕ ಕಾಮಗಾರಿ ಕೈಗೊಂಡಿಲ್ಲ. ವಾರ್ಡ್‌ಗಳಲ್ಲಿ ಅವೈಜ್ಞಾನಿಕ ಹಾಗೂ ಅಪೂರ್ಣ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

ಕಳೆದ ವರ್ಷ ಪುರಸಭೆ ವತಿಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿವಿಧ ವಾರ್ಡ್ ಗಳಲ್ಲಿ ನಿರ್ಮಿಸಿದ್ದ ನೂತನ ರಸ್ತೆಗಳು ಪೈಪ್‌ಲೈನ್‌ ಅಳವಡಿಕೆಗಾಗಿ ಹಾನಿಗೀಡಾಗುತ್ತಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಮಗಾರಿ ಚುರುಕುಗೊಳ್ಳಲು ಕ್ರಮ ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ನಿರ್ವಹಣೆಗೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಶಿವರಾಜ ನಾಯಕ
ಪರಶುರಾಮ ದೇವಮಾನೆ

ಪಟ್ಟಣದಲ್ಲಿ ಅಮೃತ-2 ಯೋಜನೆಯ ಕಾಮಗಾರಿಗಳ ಅವೈಜ್ಞಾನಿಕ ನಿರ್ವಹಣೆ ಹಾಗೂ ನಿಧಾನಗತಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ

-ಶಿವರಾಜ ನಾಯಕ ಸಾಮಾಜಿಕ ಕಾರ್ಯಕರ್ತ ಮಾನ್ವಿ

ಅಮೃತ-2 ಯೋಜನೆಯ ಕಾಮಗಾರಿಗಳ ಅನುಷ್ಠಾನದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ

-ಪರಶುರಾಮ ದೇವಮಾನೆ ಪುರಸಭೆ ಮುಖ್ಯಾಧಿಕಾರಿ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.