ADVERTISEMENT

ರಾಯಚೂರು: ಒಂಟಿ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ

ಚಂದ್ರಕಾಂತ ಮಸಾನಿ
Published 12 ನವೆಂಬರ್ 2025, 6:33 IST
Last Updated 12 ನವೆಂಬರ್ 2025, 6:33 IST
ಅನ್ನ ಸುವಿಧಾ ಯೋಜನೆ ಅಡಿಯಲ್ಲಿ ರಾಯಚೂರು ತಾಲ್ಲೂಕಿನ ಜಾಗೀರವೆಂಕಟಾಪುರದ ಫಲಾನುಭವಿಗೆ ಆಹಾರ ಇಲಾಖೆಯ ಉಪ ನಿರ್ದೇಶಕ ಉಪ ನಿರ್ದೇಶಕ ನಜೀರ್‌ಅಹಮ್ಮದ್‌ ಪಡಿತರ ಧಾನ್ಯ ವಿತರಿಸಿದರು
ಅನ್ನ ಸುವಿಧಾ ಯೋಜನೆ ಅಡಿಯಲ್ಲಿ ರಾಯಚೂರು ತಾಲ್ಲೂಕಿನ ಜಾಗೀರವೆಂಕಟಾಪುರದ ಫಲಾನುಭವಿಗೆ ಆಹಾರ ಇಲಾಖೆಯ ಉಪ ನಿರ್ದೇಶಕ ಉಪ ನಿರ್ದೇಶಕ ನಜೀರ್‌ಅಹಮ್ಮದ್‌ ಪಡಿತರ ಧಾನ್ಯ ವಿತರಿಸಿದರು   

ರಾಯಚೂರು: ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಜಿಲ್ಲೆಯಲ್ಲಿ 4289 ಒಂಟಿ ಹಿರಿಯ ನಾಗರಿಕರನ್ನು ಗುರುತಿಸಿ ಅನ್ನ ಸುವಿಧಾ ಯೋಜನೆ ಅಡಿಯಲ್ಲಿ ಅವರ ಮನೆ ಬಾಗಿಲಿಗೆ ಪಡಿತರ ಆಹಾರ ಧಾನ್ಯ ತಲುಪಿಸುವ ಕಾರ್ಯವನ್ನು ಆರಂಭಿಸಿದೆ.

ಅನ್ನ ಸುವಿಧಾ ಯೋಜನೆ ನವೆಂಬರ್ 1ರಿಂದ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. 75 ವರ್ಷ ಮೇಲ್ಪಟ್ಟ ಇಕೈವೈಸಿ ಆಗಿರುವ ಏಕ ಸದಸ್ಯ ಕಾರ್ಡುಗಳಿಗೆ ಅನ್ನ ಸುವಿಧಾ ಯೋಜನೆ ಅನ್ವಯಗೊಳಿಸಲಾಗಿದೆ. ನ್ಯಾಯಬೆಲೆ ಅಂಗಡಿಯವವ ಪಿಒಎಸ್‌ ಲಾಗಿನ್‌ನಲ್ಲಿ ಅನ್ನ ಸುವಿಧಾಕ್ಕೆ ಹೊಸ ಅವಕಾಶ ಕಲ್ಪಿಸಲಾಗಿದೆ.

ನ್ಯಾಯಬೆಲೆ ಅಂಗಡಿ ಲಾಗಿನ್ ನಲ್ಲಿ ಅರ್ಹ ಕಾರ್ಡುಗಳನ್ನು ಸೇರಿಸಲಾಗಿದೆ. ಅವರಿಗೆ ಪಡಿತರ ನೀಡುವ ದಿನಾಂಕವನ್ನೂ ನಿಗದಿಪಡಿಸಲಾಗಿದೆ. ಪ್ರತಿ ತಿಂಗಳು 6 ರಿಂದ 15 ನೇ ತಾರೀಖಿನ ವರೆಗೆ ಮಾತ್ರ ಮನೆ ಬಾಗಿಲಿಗೆ ಬಂದು ಒಟಿಪಿ ಹಾಗೂ ಬಯೊಮೆಟ್ರಿಕ್ ಪಡೆದು ಅನ್ನಸುವಿಧಾ ಅಡಿ ಪಡಿತರ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ADVERTISEMENT

ಅನ್ನಸುವಿಧಾ ಯೋಜನೆಗೆ ಒಳಪಡುವ 75 ವರ್ಷ ಮೆಲ್ಪಟ್ಟ ಒಂಟಿ ಹಿರಿಯ ನಾಗರಿಕರ ಪಡಿತರ ಚೀಟಿಗಳ ವಿವರ ಅಯಾ ನ್ಯಾಯಬೆಲೆ ಅಂಗಡಿಗಳ ಲಾಗಿನ್‌ ನಲ್ಲಿ ಲಭ್ಯವಿದೆ. ಪಡಿತರ ಚೀಟಿದಾರರ ಮನೆಯ ಬಾಗಿಲಿಗೆ ಪಡಿತರ ವಿತರಿಸಿದ ಬಗ್ಗೆ ಜಿಪಿಎಸ್ ಫೋಟೊ ತೆಗೆದು ಅಯಾ ಆಹಾರ ನೀರಿಕ್ಷಕರಿಗೆ ಸಲ್ಲಿಸುತ್ತಿದ್ದಾರೆ.

ಮನೆ ಬಾಗಿಲಲ್ಲಿ ಪಡಿತರ ನೀಡುವ ಕಾರ್ಯಕ್ಕೆ ಪ್ರತಿಯಾಗಿ ನ್ಯಾಯ ಬೆಲೆ ಅಂಗಡಿಯವರಿಗೆ ಪ್ರತಿ ಕಾರ್ಡಿನ ವಿತರಣೆಗೆ ₹ 50 ನಿಗದಿಪಡಿಸಲಾಗಿದೆ. ಮನೆಗೆ ಹೋಗಿ ಕೊಟ್ಟ ಮೇಲೆ ಲಾಗಿನ್‌ನಲ್ಲಿ ಪ್ರಿಂಟ್ ಮಾಡಿ ಆಹಾರ ನಿರೀಕ್ಷಕರಿಗೆ ಸಲ್ಲಿಸಬೇಕಾಗಲಿದೆ.

ಹಿರಿಯ ನಾಗರಿಕರು ಪ್ರತಿ ತಿಂಗಳು 1ರಿಂದ 5ನೇ ತಾರೀಖಿನೊಳಗೆ ನೋಂದಾಯಿಸಬೇಕು ಅಂದರೆ ಕೋರಿಕೆ ಸಲ್ಲಿಸಬೇಕು. ಪಡಿತರ ಅಂಗಡಿಯವರು ಪ್ರತಿ ತಿಂಗಳು 6ರಿಂದ 15ನೇ ತಾರೀಖಿನ ಅವಧಿಯಲ್ಲಿ ಮನೆ ಬಾಗಿಲಿಗೆ ಪಡಿತರ ತಲುಪಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025–26ನೇ ಸಾಲಿಇನ ಬಜೆಟ್‌ ನಲ್ಲಿ ಅನ್ನ ಸುವಿಧಾ ಯೋಜನೆ ವಿಸ್ತರಣೆ ಮಾಡುವ ಕುರಿತು ಘೋಷಣೆ ಮಾಡಿದ್ದರು. ರಾಜ್ಯದಲ್ಲಿ 2,58,154 ಹಾಗೂ ರಾಯಚೂರು ಜಿಲ್ಲೆಯಲ್ಲಿ 4289 ಫಲಾನುಭವಿಗಳು ಇದ್ದಾರೆ’ ಎನ್ನುತ್ತಾರೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ನಜೀರ್‌ಅಹಮ್ಮದ್‌.

‘ಅನ್ನ ಸುವಿಧಾ ಯೋಜನೆಯಡಿ ಒಂಟಿ ಹಿರಿಯ ನಾಗರಿಕರಿಗೆ ಪಡಿತರ ತಲುಪಿಸುವ ಕಾರ್ಯ ನವೆಂಬರ್‌ 6ರಂದು ಆರಂಭವಾಗಿದೆ. ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.