
ಸಿಂಧನೂರು: ‘ನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿಯಿಂದ ಯುವ ಜನರು ದುಶ್ಚಟಕ್ಕೆ ಒಳಗಾಗಿದ್ದು, ಇದನ್ನು ತಡೆಯಲು ಪೊಲೀಸ್, ಅಬಕಾರಿ ಸೇರಿ ವಿವಿಧ ಇಲಾಖೆಗಳನ್ನು ಒಳಗೊಂಡ ಸಭೆ ಕರೆದು ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿ ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟ ತಾಲ್ಲೂಕು ಘಟಕದಿಂದ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ಮಹೆಬೂಬಿಯಾ ಕಾಲೊನಿ, ಶರಣಬಸವೇಶ್ವರ ಕಾಲೊನಿ, ಇಂದಿರಾನಗರ, ಪ್ರಶಾಂತನಗರ, ಖದರಿಯಾ ಕಾಲೊನಿ, ಜವಳಗೇರಾ ಹಾಗೂ ಕೆಲ ಪುನರ್ವಸತಿ ಕ್ಯಾಂಪ್‍ಗಳಲ್ಲಿ ಗಾಂಜಾ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಚಾಕೂಲೇಟ್‍ನಲ್ಲಿ ಮಾದಕ ವಸ್ತುವನ್ನು ಸೇರಿಸಿ ಮಾರಾಟ, ಡ್ರಗ್ಸ್ ಒಳಗೊಂಡ ಇಂಜೆಕ್ಷನ್ ಮಾರಾಟ ಮಾಡಲಾಗುತ್ತಿದೆ. ಆದರೂ ಪೊಲೀಸ್ ಇಲಾಖೆ ಇದನ್ನು ತಡೆಯಲು ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಂಚಾಲಕ ಚಂದ್ರಶೇಖರ ಗೊರಬಾಳ ಹಾಗೂ ಟಿ.ಹುಸೇನ್‍ಸಾಬ್ ಆಪಾದಿಸಿದರು.
ಗಾಂಜಾ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ಕೆಲವರು ನಗರದ ಹಲವು ವಾರ್ಡ್‍ಗಳಲ್ಲಿ ಸಾರ್ವಜನಿಕರನ್ನು ಹೆದರಿಸುವುದು-ಬೆದರಿಸುವುದು ಮಾಡುತ್ತಿದ್ದು, ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ವಾರ್ಡ್‍ಗಳಲ್ಲಿ ಬೀಟ್‍ಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಸಂಚಾಲಕ ಬಾಬರ್ ಪಾಷಾ ವಕೀಲ, ಎಸ್.ಎ. ಖಾದರ್‌ಸುಬಾನಿ, ಬಸವರಾಜ ಬಾದರ್ಲಿ, ಕೆ.ಜಿಲಾನಿಷಾ, ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ಶಂಕರ ಗುರಿಕಾರ, ಬಸವಂತರಾಯಗೌಡ ಕಲ್ಲೂರು, ರೆಹಮಾನ್‍ಸಾಬ್, ಅಬುಲೈಸ್ ನಾಯ್ಕ್, ಬಸವರಾಜ ಹಳ್ಳಿ, ಸರ್ಪರಾಜ್‍ಖಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.