ADVERTISEMENT

ಕವಿತಾಳ: ಪಾದಯಾತ್ರಿಗಳಿಗೆ ಊಟ, ಉಪಾಹಾರ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 13:12 IST
Last Updated 24 ಜನವರಿ 2025, 13:12 IST
ಕವಿತಾಳದಲ್ಲಿ ಮಂತ್ರಾಲಯ ಪಾದಯಾತ್ರಿಗಳಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಿದ ನಾಗರಾಜ ಮತ್ತು ಸ್ನೇಹಿತರು
ಕವಿತಾಳದಲ್ಲಿ ಮಂತ್ರಾಲಯ ಪಾದಯಾತ್ರಿಗಳಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಿದ ನಾಗರಾಜ ಮತ್ತು ಸ್ನೇಹಿತರು    

ಕವಿತಾಳ: ಪಟ್ಟಣದಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿಯ ನಾಗರಾಜ ಠಂಕಸಾಲಿ ಮತ್ತು ಸ್ನೇಹಿತರು ಮಂತ್ರಾಲಯ ಪಾದಯಾತ್ರಿಗಳಿಗೆ ನೆರಳು, ಕುಡಿಯುವ ನೀರು, ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಿದ್ದಾರೆ.

ದಶಕಗಳಿಂದ ಪಾದಯಾತ್ರೆ ಸಾಗುತ್ತಿರುವ ನಾಗರಾಜ ಮತ್ತು ಸ್ನೇಹಿತರು ಪಾದಯಾತ್ರಿಗಳು ಅನುಭವಿಸುತ್ತಿದ್ದ ತೊಂದರೆಯನ್ನು ಮನಗಂಡು ವಿವಿಧೆಡೆ ತಾವೇ ಸೂಕ್ತ ವ್ಯವಸ್ಥೆಗೆ ಮುಂದಾಗಿದ್ದಾರೆ.

ಇಲ್ಲಿನ ರಾಯಚೂರು-ಲಿಂಗಸುಗೂರು ರಾಜ್ಯ ಹೆದ್ದಾರಿ ಗುಂಡಮ್ಮನ ತೋಟದ ಹತ್ತಿರ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಕೆಲ ಹೊತ್ತು ಮಲಗಿ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬೆಳಗಿನ ಉಪಾಹಾರ ಮಧ್ಯಾಹ್ನ ಹಾಗೂ ರಾತ್ರಿಗೆ ಊಟ, ಸಂಜೆ ಲಘು ಉಪಾಹಾರ, ವಿವಿಧ ಬಗೆಯ ಹಣ್ಣು, ಹಣ್ಣಿನ ಜ್ಯೂಸ್‌, ಕಬ್ಬಿನ ರಸ, ಮೈ, ಕೈ, ತಲೆ ನೋವು ಮತ್ತು ಜ್ವರಕ್ಕೆ ಅಗತ್ಯ ಮಾತ್ರೆ ಸೇರಿದಂತೆ ಎಲ್ಲ ಬಗೆಯ ವ್ಯವಸ್ಥೆ ಮಾಡಲಾಗಿದೆ.

ADVERTISEMENT

‘ಪಾದಯಾತ್ರಿಗಳು ಆಗಮಿಸುವ ಮುನ್ನವೇ ತಾವು ಬಂದು ಎಲ್ಲ ವ್ಯವಸ್ಥೆ ಮಾಡುತ್ತಿದ್ದು, ಎರಡು ದಿನಗಳವರಗೆ ಸೌಲಭ್ಯ ಕಲ್ಪಿಸಲಾಗುವುದು. ಮಂತ್ರಾಲಯ ತಲುಪುವುದರೊಳಗೆ ಮಾನ್ವಿ ಪಟ್ಟಣ ಸೇರಿದಂತೆ ಬೇರೆ ಎರಡು ಕಡೆ ಈ ರೀತಿ ವ್ಯವಸ್ಥೆ ಮಾಡುತ್ತಿದ್ದೇವೆ. ಶ್ಯಾಮಿಯಾನ, ಆಹಾರ ಧಾನ್ಯಗಳು ಮತ್ತಿತರ ಅಗತ್ಯ ಸಾಮಗ್ರಿ ಸಾಗಿಸಲು ವಾಹನ ವ್ಯವಸ್ಥೆ ಹೊಂದಿದ್ದು ಯಾತ್ರಿಕರು ಮುಂದಿನ ಸ್ಥಳ ತಲುಪುವಷ್ಟರಲ್ಲಿ ತಾವು ತೆರಳಿ ತಯಾರಿ ಮಾಡುವುದಾಗಿ’ ನಾಗರಾಜ ಠಂಕಸಾಲಿ ತಿಳಿಸಿದರು.

‘ದೂರದ ದಾರಿ ನಡೆದು ಬರುವ ಯಾತ್ರಿಕರು ಬಳಲಿರುತ್ತಾರೆ. ವೃದ್ಧರು, ಮಹಿಳೆಯರು, ಮಕ್ಕಳಲ್ಲಿ ಸುಸ್ತು ಕಂಡು ಬರುತ್ತದೆ. ಊಟ, ಉಪಾಹಾರದ ಜತೆ ಚಹಾ, ಕಾಫಿ ಮತ್ತು ಕೆಲವು ಔಷಧ, ಮಾತ್ರೆಗಳನ್ನು ನೀಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಯಾತ್ರಿಕರ ನೆರವಿಗೆ ಧಾವಿಸಲು ಸಿದ್ಧರಾಗಿರುತ್ತೇವೆ’ ಎಂದು ನಾಗರಾಜ ಅವರ ಸ್ನೇಹಿತರಾದ ಬಾಗಲಕೋಟಿಯ ಪ್ರಮೋದ ಪತ್ತಾರ್‌, ಕುಕ್ಕೇರಿಯ ಅಕ್ಷಯ ಬಡಿಗೇರ, ಹುಬ್ಬಳ್ಳಿಯ ಮಂಜುನಾಥ ಕಾಗವಾಡ, ಬೇವೂರಿನ ಈಶ್ವರ ಪತ್ತಾರ್‌, ಮಂಜುನಾಥ ಪತ್ತಾರ್‌, ಅಭಿ ಆವಟಿ ಮತ್ತು ಅಮೀನಗಡದ ವಿಠಲ ಪತ್ತಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.