
ಮಸ್ಕಿ: ಪಟ್ಟಣದಲ್ಲಿ ಸಾಮ್ರಾಟ್ ಅಶೋಕನ ಶಿಲಾ ಶಾಸನ ಪತ್ತೆಯಾದ 110 ವರ್ಷಗಳ ನಂತರ ಬೃಹತ್ ಅಶೋಕನ ಸ್ತಂಭ ಹಾಗೂ ವೃತ್ತ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬಂದಿದೆ.
ಪಟ್ಟಣದ ನಾಲ್ಕು ರಸ್ತೆ ಕೂಡುವ ಈಗಿನ ಅಶೋಕ ವೃತ್ತದಲ್ಲಿಯೇ ಕಲ್ಲಿನ ಶಿಲೆಯಲ್ಲಿ ಬೃಹತ್ ಆಶೋಕ ಸ್ತಂಭ ನಿರ್ಮಾಣಕ್ಕೆ ಶಾಸಕರೂ ಆದ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಅವರು ಶಿಫಾರಸು ಮಾಡಿದ್ದರು. ಆದ ಕಾರಣ ಜಿಲ್ಲೆಯ ಖನಿಜ ಪ್ರತಿಷ್ಠಾನದ ನಾಲ್ಕನೇ ಹಂತದಲ್ಲಿ ₹ 50 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಮೊದಲ ಕಂತಾಗಿ ₹ 25 ಲಕ್ಷ ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ನಿತೀಶ ಬಿ. ಆದೇಶಿಸಿದ್ದಾರೆ.
ವೃತ್ತ ನಿರ್ಮಾಣದ ಜವಾಬ್ದಾರಿಯನ್ನು ಶಕ್ತಿನಗರದ ಕ್ಯಾಷುಟೆಕ್ ಸಂಸ್ಥೆಗೆ ವಹಿಸಲಾಗಿದೆ.
ಶಿರಾದ ಕಲ್ಲಿನಲ್ಲಿ ಕಲಾಕೃತಿಯ ವೃತ್ತ ಹಾಗೂ ಸ್ತಂಭ ನಿರ್ಮಾಣವಾಗಲಿದೆ. ಕೆತ್ತನೆಯ ಜವಾಬ್ದಾರಿಯನ್ನು ಮುರುಡೇಶ್ವರದ ಖ್ಯಾತ ಶಿಲ್ಪಿ ನಾಗರಾಜ ಮತ್ತು ಅವರ ತಂಡಕ್ಕೆ ವಹಿಸಲಾಗಿದೆ. ಸುಮಾರು 15 ಅಡಿ ಎತ್ತರ ಹಾಗೂ 20 ಅಡಿ ಅಗಲದ ಪೀಠದ ಮೇಲೆ ನಾಲ್ಕು ಅಡಿಯ ನಾಲ್ಕು ಮುಖದ ಸಿಂಹ (ಅಶೋಕ ಲಾಂಛನ) ನಿರ್ಮಾಣವಾಗಲಿದೆ. ಶೀಘ್ರದಲ್ಲಿಯೇ ವೃತ್ತ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.