ADVERTISEMENT

​ಆತ್ಮನಿರ್ಭರ: ಸಾಲ ಮಂಜೂರು ಮಾಡಿ

ಸಿಂಧನೂರು ನಗರಸಭೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕರ ಸಭೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 12:55 IST
Last Updated 9 ಜುಲೈ 2021, 12:55 IST
ಸಿಂಧನೂರಿನ ನಗರಸಭೆ ಸಭಾಭವನದಲ್ಲಿ ಶುಕ್ರವಾರ ನಡೆದ ‘ಆತ್ಮನಿರ್ಭರ‘ ನಿಧಿ ಯೋಜನೆಯಡಿ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರ ಸಭೆಯಲ್ಲಿ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿದರು
ಸಿಂಧನೂರಿನ ನಗರಸಭೆ ಸಭಾಭವನದಲ್ಲಿ ಶುಕ್ರವಾರ ನಡೆದ ‘ಆತ್ಮನಿರ್ಭರ‘ ನಿಧಿ ಯೋಜನೆಯಡಿ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರ ಸಭೆಯಲ್ಲಿ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿದರು   

ಸಿಂಧನೂರು: ‘ಆತ್ಮನಿರ್ಭರ ನಿಧಿ‘ ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಎರಡನೇ ಅವಧಿ ಸಾಲ ಮಂಜೂರು ಮಾಡಬೇಕು‘ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಬು ಬಳಗಾನೂರು ಸೂಚನೆ ನೀಡಿದರು.

ಸ್ಥಳೀಯ ನಗರಸಭೆ ಸಭಾಭವನದಲ್ಲಿ ಶುಕ್ರವಾರ ನಡೆದ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸಕ್ತ ವರ್ಷ ಸಿಂಧನೂರು ನಗರಸಭೆಗೆ 758 ಭೌತಿಕ ಗುರಿ ಇತ್ತು. ಆದರೆ ತಮ್ಮ ಬ್ಯಾಂಕ್ ವ್ಯಾಪ್ತಿಗೆ ಬರುವ 1298 ಫಲಾನುಭವಿಗಳು ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬ್ಯಾಂಕುಗಳ ಸಹಕಾರದಿಂದ 1076 ಅರ್ಜಿಗಳಿಗೆ ಮಂಜೂರಾತಿ ನೀಡಿ, 1042 ವಿತರಣೆ ಮಾಡಿದ್ದರಿಂದ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ದೇಶದ ಟಾಪ್ ಟೆನ್ ಪಟ್ಟಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಿಂಧನೂರು ನಗರಸಭೆಗೆ ಅವಕಾಶವಿದ್ದು, ಪೌರಾಡಳಿತ ನಿರ್ದೇಶಕರ ಸೂಚನೆ ಮೇರೆಗೆ 3107ಕ್ಕೂ ಹೆಚ್ಚು ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿತರಿಸಿ ಪ್ರಗತಿ ಸಾಧಿಸಬೇಕಿದೆ ಎಂದರು.

ADVERTISEMENT

ನಿಗದಿತ ಗುರಿ ತಲುಪಲು ನಗರಸಭೆಯಿಂದ ಆತ್ಮನಿರ್ಭರ ನಿಧಿ ಅಭಿಯಾನ ಮಾಡಿ ಇನ್ನೂ 2065ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡಬೇಕಿದೆ. ಆನ್‍ಲೈನ್ ಮೂಲಕ ಬ್ಯಾಂಕಿಗೆ ಬರುವ ಎಲ್ಲ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಸಾಲ ಸೌಲಭ್ಯ ಒದಗಿಸಿಕೊಡಬೇಕು. ಸಿಬಿಲ್ ಸ್ಕೋರ್ ಆಗಲಿ ಇನ್ನಿತರ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಿ ವಿಶೇಷ ಕಾಳಜಿ ವಹಿಸಿ ಸಾಲ ವಿತರಣೆ ಮಾಡಬೇಕು ಎಂದು ಅವರು ಹೇಳಿದರು.

ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿ, ಸಿಂಧನೂರು ನಗರಸಭೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಬ್ಯಾಂಕುಗಳ ಸಹಕಾರ ಪ್ರಮುಖವಾಗಿದೆ. ಇನ್ನೂ ಮುಂದಿನ ದಿನಗಳಲ್ಲೂ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ. ಕೂಡಲೇ ವಿಲೇವಾರಿ ಮಾಡಿ ಅವರಿಗೆ ಸಾಲ ಸೌಲಭ್ಯ ಒದಗಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದಲ್ಲಿ ಜಿಲ್ಲಾಧಿಕಾರಿಗೆ ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ದೂರು ನೀಡಲಾಗುವುದು ಎಂದು ಹೇಳಿದರು.

ಸಿಎಒ ದುರುಗಪ್ಪ ಹಸಮಕಲ್ ಮಾತನಾಡಿದರು.

ಜಿಲ್ಲಾ ಕೌಶಲಾಭಿವೃದ್ದಿ ಇಲಾಖೆ ಮಿಷನ್ ವ್ಯವಸ್ಥಾಪಕ ರಸೂಲ್ ಸೇರಿದಂತೆ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು, ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.