ADVERTISEMENT

ರಾಯಚೂರಿನಲ್ಲಿ ಬಂದ್‌ ಭಾಗಶಃ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 14:09 IST
Last Updated 28 ಸೆಪ್ಟೆಂಬರ್ 2020, 14:09 IST
ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ನಿಮಿತ್ತ ರಾಯಚೂರಿನ ಬಟ್ಟೆ ಬಜಾರ್ ನಲ್ಲಿ ಬೆಳಿಗ್ಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು
ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ನಿಮಿತ್ತ ರಾಯಚೂರಿನ ಬಟ್ಟೆ ಬಜಾರ್ ನಲ್ಲಿ ಬೆಳಿಗ್ಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು   

ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ಮಾಡುತ್ತಿರುವ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸುವುದನ್ನು ಕೈಬಿಡುವಂತೆ ಒತ್ತಾಯಿಸಿ ಜಿಲ್ಲೆಯಾದ್ಯಂತ ರೈತ ಸಂಘಟನೆಗಳು ಸೋಮವಾರ ನಡೆಸಿದ ಬಂದ್‌ ಭಾಗಶಃ ಯಶಸ್ವಿಯಾಯಿತು.

ಸಿಂಧನೂರಿನಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದೇವದುರ್ಗ, ಲಿಂಗಸುಗೂರು, ಮಾನ್ವಿ, ಮಸ್ಕಿ ಹಾಗೂ ಸಿರವಾರ ತಾಲ್ಲೂಕುಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿತೆ ವ್ಯಕ್ತವಾಯಿತು. ಮಸ್ಕಿ, ಸಿರವಾರ, ದೇವದುರ್ಗ ತಾಲ್ಲೂಕುಗಳಲ್ಲಿ ಪ್ರತಿಭಟನೆಗೆ ಬಂದ್‌ ಸಿಮೀತವಾಗಿತ್ತು. ಇನ್ನುಳಿದ ಕಡೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸರ್ಕಾರಿ ಬಸ್‌ಗಳ ಸಂಚಾರ ಮಧ್ಯಾಹ್ನದವರೆಗೂ ಇರಲಿಲ್ಲ. ಅರ್ಧಕ್ಕಿಂತ ಹೆಚ್ಚಿನ ಭಾಗದ ಅಂಗಡಿ ಮುಗ್ಗಟ್ಟುಗಳು ಮಧ್ಯಾಹ್ನದವರೆಗೂ ತೆರೆದುಕೊಳ್ಳಲಿಲ್ಲ. ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಆರಂಭವಾಗಿತ್ತು. ಆಟೊ, ಲಾರಿಗಳು, ಕಾರುಗಳು ಸಂಚರಿಸಿದವು.

ADVERTISEMENT

ಅಖಿಲ ಭಾರತ ರೈತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ತುಂಗಭದ್ರಾ ಎಡದಂಡೆ ಕಾಲುವೆ ಹೋರಾಟ ಸಮಿತಿ, ಪ್ರಗತಿಪರ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಅಂಬೇಡ್ಕರ್‌ ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಕಾಂಗ್ರೆಸ್‌, ಜಿಲ್ಲಾ ಜೆಡಿಎಸ್‌ ಹಾಗೂ ಸಿಪಿಐ (ಎಂಎಲ್‌) ರೆಡ್‌ಸ್ಟಾರ್‌, ಮಾದಿಗ ದಂಡೋರ ಸಮಿತಿ, ಕರ್ನಾಟಕ ರಕ್ಷಣಾ ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ನಗರದ ವಿವಿಧೆಡೆ ಪ್ರತ್ಯೇಕವಾಗಿ ರ‍್ಯಾಲಿ ನಡೆಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಧ್ಯಾಹ್ನದ ನಂತರ ಸರ್ಕಾರಿ ಬಸ್‌ಗಳ ಸಂಚಾರವು ಆರಂಭವಾಯಿತು. ಅಂಗಡಿ ಮುಂಗಟ್ಟುಗಳೆಲ್ಲ ಎಂದಿನಂತೆ ವ್ಯಾಪಾರ ಆರಂಭಿಸಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆಸಿಲ್ಲ. ಪೊಲೀಸರು ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.