ಲಿಂಗಸುಗೂರು: ಬಸವಸಾಗರ ಜಲಾಶಯದಿಂದ 2.60 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಿದ್ದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ.
ಈ ವರ್ಷ ಅವಧಿಗೆ ಮುನ್ನವೇ ಜಲಾಶಯ ಭರ್ತಿಯಾಗಿ ಜೂನ್ ತಿಂಗಳಿಂದಲೇ ನದಿಗೆ ನೀರು ಹರಿಸಲಾಗುತ್ತಿದೆ. ಕಳೆದ ಎರಡ್ಮೂರು ದಿನಗಳಲ್ಲಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದರಿಂದ ಅಷ್ಟೇ ಪ್ರಮಾಣದಲ್ಲಿ ನೀರು ನದಿಗೆ ಹರಿಸಲಾಗುತ್ತಿದೆ.
ಬುಧವಾರ ಜಲಾಶಯದಿಂದ 2.60 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದ್ದರಿಂದ ತಾಲ್ಲೂಕಿನ ಕಡದರಗಡ್ಡಿ ಗ್ರಾಮದಲ್ಲಿ ಕುಡಿವ ನೀರಿನ ಭಾವಿ ಮುಳುಗಡೆಯಾಗಿದ್ದು, ಕುಡಿಯುವ ನೀರಿಗೆ ಪಯಾರ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ಹಂಚಿನಾಳ, ಯರಗೋಡಿ, ಕಡದರಗಡ್ಡಿ, ಯಳಗುಂದಿ ಗ್ರಾಮಗಳು ಮುಖ್ಯ ರಸ್ತೆ ಸಂಪರ್ಕ ಕಡಿತವಾಗಿದೆ. ಜಲದುರ್ಗ ಮಾರ್ಗವಾಗಿ ಸುಮಾರು ಲಿಂಗಸುಗೂರು ಪಟ್ಟಣಕ್ಕೆ ತಲುಪಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಶೀಲಹಳ್ಳಿ ಸೇತುವೆ ಎತ್ತರಿಸುವ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಪ್ರಸ್ತಾವ ಮೇರೆಗೆ 2025 ಜೂನ್ 19ರಂದು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
‘ಪ್ರವಾಹ ಪರಿಸ್ಥಿತಿ ನಿಭಾಯಿಸಲು ತಾಲ್ಲೂಕಿನ ನದಿ ತೀರದ ಪ್ರತಿ ಗ್ರಾಮಕ್ಕೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡುತ್ತಿದ್ದಾರೆ. ನದಿತೀರದ ಗ್ರಾಮಗಳಿಗೆ ಮೊಬೈಲ್ ಚಿಕಿತ್ಸಾ ವಾಹನ ನಿಯೋಜಿಸಲಾಗಿದೆ. ಪಡಿತರ ದಾನ್ಯ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಪ್ರಜಾವಾಣಿಗೆ ತಿಳಿಸಿದರು.
ಅವಧಿಗೂ ಮುನ್ನ ಪ್ರವಾಹ ಪರಿಸ್ಥಿತಿ ಎದುರಾಗಿದ್ದರಿಂದ ನಡುಗಡ್ಡೆಯಾದ ಕರಕಲಗಡ್ಡಿಯಲ್ಲಿ ಈ ಭಾರಿ ಜಮೀನಿನಲ್ಲಿ ಭಿತ್ತನೆ ಕಾರ್ಯಕ್ಕೆ ಎತ್ತುಗಳು ಇಲ್ಲದಿರುವುದರಿಂದ 15 ಎಕರೆ ಫಲವತ್ತಾದ ಕೃಷಿ ಭೂಮಿ ಈ ವರ್ಷ ಬೀಳು ಬೀಳುವಂತಾಗಿದೆ. 2.60 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದರಿಂದ ಕರಕಲಗಡ್ಡಿಯಲ್ಲಿ ವಿದ್ಯುತ್ ಸಂಪರ್ಕದ ಕಂಬ ತಂತಿಗಳು ನೀರಿಗೆ ತಾಗಲು ಒಂದು ಮೀಟರ್ ಬಾಕಿ ಇದ್ದು ಒಂದು ವೇಳೆ ನೀರಿನ ಮಟ್ಟ ಮತ್ತುಷ್ಟು ಹೆಚ್ಚಾದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಕರಕಲಗಡ್ಡಿ ನಿವಾಸಿ ದ್ಯಾಮಣ್ಣ ಹೇಳುತ್ತಾರೆ. ಪ್ರವಾಹ ಇದ್ದಾಗ ಬೇಡ ಇಳಿಮುಖವಾದಾಗಲೂ ಯಾವುದೇ ಶಾಸಕರಾಗಲಿ ನಡುಗಡ್ಡೆಗೆ ಬೇಟಿ ನೀಡಿ ಕರಕಲಗಡ್ಡಿ ಹೊಂಕಮ್ಮನಗಡ್ಡಿ ಮಾದರಗಡ್ಡಿಗಳ ಜನ ಪ್ರತಿವರ್ಷ ಅನುಭವಿಸುವ ಯಾತನೆ ಬಗ್ಗೆ ವಾಸ್ತವ ಸ್ಥಿತಿ ಅರಿತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಯಳಗುಂದಿ ಗ್ರಾಮದ ಆದಪ್ಪ ನಾಯಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.