ಜಾಲಹಳ್ಳಿ: ಪಟ್ಟಣದ ಬಸವೇಶ್ವರ ಕಾಲೊನಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಬೇಕು. ಅಂಗನವಾಡಿ, ವ್ಯಾಯಾಮ ಕಟ್ಟಡ, ಗ್ರಂಥಾಲಯ ಕಟ್ಟಡದ ಸುತ್ತ ಬೆಳೆದಿರುವ ಜಾಲಿಗಿಡಗಳನ್ನು ತೆರವುಗೊಳಿಸಬೇಕು ಎಂದು ಕಾಲೊನಿ ನಿವಾಸಿಗಳು ಮಂಗಳವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಸಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಂಥಾಯಲದ ಸುತ್ತಲೂ ಜಾಲಿಗಿಡ ಬೆಳೆದಿರುವುದರಿಂದ ಓದುಗರು ಅಲ್ಲಿಗೆ ಹೋಗಲು ಭಯ ಪಡುವಂತಾಗಿದೆ. ಅಲ್ಲದೇ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರ ಇದ್ದು, ಚಿಕ್ಕಚಿಕ್ಕ ಮಕ್ಕಳು ಬರುತ್ತಾರೆ. ಗಿಡಗಂಟಿ ಬೆಳೆದಿರುವುದರಿಂದ ವಿಷಜಂತುಗಳ ಭಯದಿಂದ ಪಾಲಕರು ಅಂಗನವಾಡಿ ಕೇಂದ್ರಕ್ಕೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಸುಮಾರು ₹15 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ (ಆರ್.ಒ) ಘಟಕ ಇದ್ದು, ಒಂದು ದಿನ ಕೂಡ ನೀರು ಸರಬರಾಜು ಅಗಿಲ್ಲ. ಘಟಕ ದುರಸ್ತಿಯಲ್ಲಿದ್ದರಿಂದ ಸಮಸ್ಯೆ ಆಗಿದೆ. ಅದರ ಪಕ್ಕದಲ್ಲಿಯೇ ಕೈಪಂಪ್ ಇದ್ದು, ಅದೂ ಕೂಡ ದುರಸ್ತಿಯಲ್ಲಿದೆ.
ಗ್ರಾಮ ಪಂಚಾಯಿತಿಗೆ ಸೇರಿದ ವ್ಯಾಯಾಮ ಶಾಲೆ ಇದ್ದು, ಅದರ ಸುತ್ತಲೂ ಜಾಲಿ ಗಿಡಗಳು ಬೆಳೆದು ನಿತ್ಯ ಹಾವು, ಚೇಳು ಕಂಡುಬರುತ್ತವೆ. ಕಾಲೊನಿಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಚರಂಡಿ, ರಸ್ತೆ ಸೇರಿದಂತೆ ಅಗತ್ಯ ಸೌಲಭ್ಯ ಇಲ್ಲದೇ ಇರುವುದರಿಂದ ಸಮಸ್ಯೆ ಆಗಿದೆ ಎಂದು ನಿವಾಸಿಗಳು ದೂರಿದ್ದಾರೆ.
ತಕ್ಷಣ ಕಾಲೊನಿಯಲ್ಲಿರುವ ಸಮಸ್ಯೆಗಳನ್ನು ಒಂದು ವಾರದಲ್ಲಿ ಸರಿಪಡಿಸಬೇಕು. ಇಲ್ಲವಾದರೆ, ಕುಟುಂಬ ಸಮೇತವಾಗಿ ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಸಿದರು.
ನಿವಾಸಿಗಳಾದ ಶೈಲೇಶಕುಮಾರ ಘನಾತೆ, ಬಾಲಪ್ಪ ಗೌಡ, ಅಮೃತ್ ಗೌಡ, ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.