
ಲಿಂಗಸುಗೂರು: ‘ಸೈಬರ್ ಮೂಲಕ ಅನೇಕರು ವಂಚನೆಗೊಳಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದಿರಬೇಕು’ ಎಂದು ರಾಯಚೂರು ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು.
‘ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ನಮಗೆ ಅರಿವಿರದೇ ಮೋಸಕ್ಕೆ ಒಳಗಾಗುತ್ತಿದ್ದೇವೆ. ಇದನ್ನು ಎಚ್ಚರಿಕೆಯಿಂದ ಬಳಕೆ ಮಾಡಿದರೆ ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಸಾಮಾಜಿಕ ಜಾಲತಾಣದಲ್ಲಿ ಅವಘಡಗಳು ಹೆಚ್ಚಾಗಿದ್ದು, ಅನೇಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಮಾಡದ ಅಪರಾಧಕ್ಕೆ ಬೆದರಿಕೆ ಕರೆಗಳು ಬರುತ್ತವೆ ಆ ಮೂಲಕ ಡಿಜಿಟಲ್ ಅರೆಸ್ಟ್ ನಂತಹ ಜಾಲದಲ್ಲಿ ಸಿಲುಕಿ ಕೋಟಿಗಟ್ಟಲೆ ಹಣ ಕಳೆದುಕೊಂಡವರೂ ಇದ್ದಾರೆ’ ಎಂದರು.
‘ಇಂತಹ ಪ್ರಕರಣಗಳನ್ನು ಸೈಬರ್ ಅಪರಾಧ ವಿಭಾಗ ಭೇದಿಸಿದೆ. ಜನರಿಗೆ ನ್ಯಾಯ ಒದಗಿಸಲಾಗಿದೆ. ಆದರೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮೋಹದ ಜಾಲದೊಳಗೆ ಸಿಲುಕಿ ವಂಚನೆಗೆ ಒಳಗಾಗದೇ ಎಚ್ಚರಿಕೆ ವಹಿಸಬೇಕು’ ಎಂದರು.
ಈ ವೇಳೆ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ತಹಶೀಲ್ದಾರ್ ಸತ್ಯಮ್ಮ, ಪ್ರಾಂಶುಪಾಲ ವೆಂಕಟನಾರಾಯಣ, ಪ್ರಾಧ್ಯಾಪಕ ಹನುಮಂತಪ್ಪ, ಸಂಗನಗೌಡ, ನವೀನಕುಮಾರ, ಸರಿತಾ ಇಂಚೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.