ADVERTISEMENT

ತುಂಗಭದ್ರಾ ಪುಷ್ಕರಸ್ನಾನ ಆರಂಭ: ಮಂತ್ರಾಲಯ ಶ್ರೀ ಪೂಜೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 20:45 IST
Last Updated 20 ನವೆಂಬರ್ 2020, 20:45 IST
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ತುಂಗಭದ್ರಾ ಪುಷ್ಕರ ನಿಮಿತ್ತ ಶುಕ್ರವಾರ ನದಿಯಲ್ಲಿ ಮಿಂದು ವಿಶೇಷ ಪೂಜೆ ನೆರವೇರಿಸಿದರು
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ತುಂಗಭದ್ರಾ ಪುಷ್ಕರ ನಿಮಿತ್ತ ಶುಕ್ರವಾರ ನದಿಯಲ್ಲಿ ಮಿಂದು ವಿಶೇಷ ಪೂಜೆ ನೆರವೇರಿಸಿದರು   

ರಾಯಚೂರು: ಪ್ರತಿ 12 ವರ್ಷಗಳಿಗೊಮ್ಮೆ ನಡೆಯಲಿರುವ ತುಂಗಭದ್ರಾ ಪುಷ್ಕರಸ್ನಾನ ಶುಕ್ರವಾರ ಆರಂಭ
ಗೊಂಡಿದ್ದು, ಮಂತ್ರಾಲಯದಲ್ಲಿ ಶ್ರೀರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ನದಿಯಲ್ಲಿ ಮಿಂದು ಪೂಜೆ ನೆರವೇರಿಸಿದರು.

ಪುರೋಹಿತರ ಮಂತ್ರೋಚ್ಛಾರಣೆಯೊಂದಿಗೆ ನದಿಯಲ್ಲಿ ಶ್ರೀಗಳು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಆ ನಂತರ ಭಕ್ತರು, ‘ಪ್ರಯಾಗ, ಪ್ರಯಾಗ’ ಎನ್ನುತ್ತ ನದಿಯಲ್ಲಿ ಮುಳುಗೆದ್ದರು. ನದಿತಟದಲ್ಲಿ ಕಳಸೋದಕ ಪೂಜೆ ನೆರವೇರಿತು.

ಇದಕ್ಕೂ ಮುನ್ನ ಗಂಗಾ, ಯಮುನಾ,ಗೋಧಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ನದಿಗಳ ನೀರನ್ನು ಹೊಂದಿದ್ದ ಕಳಸಗಳು ಮತ್ತು ರಾಯರ ಉತ್ಸವಮೂರ್ತಿಯ ಮೆರವಣಿಗೆ ನಡೆಯಿತು.

ADVERTISEMENT

‘ಭಕ್ತರು ಪುಷ್ಕರ ಸ್ನಾನ ಮಾಡಿ ಪುನೀತರಾಗಬೇಕು. ಪುಷ್ಕರದ ವೇಳೆ ಮುಕ್ಕೋಟಿ ದೇವತೆಗಳು ನದಿಯಲ್ಲಿ ನೆಲೆಸಿರುತ್ತಾರೆ ಎಂಬ ನಂಬಿಕೆಯಿದೆ. ಪುಣ್ಯಪ್ರಾಪ್ತಿಗೆ ನದಿಸ್ನಾನ ಅಥವಾ ಸಿಂಪಡಣೆ ಸಾಕು. ಕೋವಿಡ್ ನಿಯಮಗಳ ಪಾಲನೆ ಅವಶ್ಯ’ ಎಂದು ಶ್ರೀಗಳು ತಿಳಿಸಿದರು.

ಸುಸಜ್ಜಿತ ಸ್ನಾನಘಟ್ಟ: ‘ಮಂತ್ರಾಲಯದಲ್ಲಿ ತುಂಗಭದ್ರಾ ನದಿ ತೀರದಲ್ಲಿ ₹ 13 ಕೋಟಿ ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಸ್ನಾನಘಟ್ಟವನ್ನು ನಿರ್ಮಿಸುವ ಯೋಜನೆಯಿದ್ದು, ವರ್ಷದೊಳಗೆ ಕಾಮಗಾರಿ ಪೂರ್ಣವಾಗಲಿದೆ. ಇನ್ಫೊಸಿಸ್‌ ಮುಖ್ಯಸ್ಥರಾದ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಆರ್ಥಿಕ ನೆರವು ನೀಡುತ್ತಿದ್ದಾರೆ’ ಎಂದು ಶ್ರೀಗಳು ತಿಳಿಸಿದರು. ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಚೀಕಲಪರ್ವಿಯ ವಿಜಯದಾಸರ ಕಟ್ಟೆ ಬಳಿ ಮತ್ತು ಸಿಂಧನೂರು ತಾಲ್ಲೂಕಿನ ದಢೇಸೂಗೂರು ಶಿವ ದೇವಸ್ಥಾನದ ಬಳಿ ಜನರಿಗೆ ಪುಷ್ಕರ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಶ್ರಾದ್ಧ, ಪಿಂಡಪ್ರದಾನ ಮತ್ತು ತರ್ಪಣ ಬಿಡುವ ಕಾರ್ಯ ಪುರೋಹಿತರಿಂದ ಮಾಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.