ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳ ಶಾಹಿಗಳ ಪರವಾಗಿ ನಿಂತಿದ್ದು, ದೇಶದಲ್ಲಿ ಬಡತನ, ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಎಲ್ಲರೂ ಸರ್ಕಾರದ ವಿರುಧ್ಧ ಹೋರಾಡಲು ಮುಂದೆ ಬರಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಸೇಶನ್ (ಎಐಡಿವೈಓ) ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್ ತಿಳಿಸಿದರು.
ಆಲ್ ಇಂಡಿಯಾ ವಿದ್ಯಾರ್ಥಿ ಹಾಗೂ ಮಹಿಳಾ ಸಂಘಟನೆಗಳಿಂದ ಭಗತ್ ಸಿಂಗ್ ವೃತ್ತದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಹೀದ್ ಭಗತ್ ಸಿಂಗ್ ಅವರ 114 ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಯಾವುದೇ ಹಳೆಯ ವಿಚಾರಗಳನ್ನು ಹಾಗೆ ಒಪ್ಪಬೇಡಿ, ತರ್ಕದ ಓರೆಗಲ್ಲಿಗೆ ಹಚ್ಚಿ ನೋಡಿ, ಸರಿ ಇದ್ದರೆ ಮಾತ್ರ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಅದನ್ನು ಟೀಕೆ ಮಾಡಬೇಕು ಎಂದು ಭಗತ್ ಸಿಂಗ್ ಅವರು ಹೇಳಿದ್ದರು. ಅವರ ವಿಚಾರಧಾರೆ ವೈಜ್ಞಾನಿಕ ಮನೋಧರ್ಮ ಮತ್ತು ತರ್ಕಬದ್ಧವಾಗಿದೆ ಎಂದು ಹೇಳಿದರು.
ಮಹೇಶ ಚೀಕಲಪರ್ವಿ ಮಾತನಾಡಿ, ಒಂದು ಸಮಾಜವಾದ ರಾಷ್ಟ್ರವನ್ನು ನಿರ್ಮಾಣ ಮಾಡಬೇಕು ಎಂಬುವುದು ಭಗತಸಿಂಗ್ ಅವರ ಕನಸಾಗಿತ್ತು. ಎಲ್ಲ ಬಡಜನರಿಗೆ ಮೂಲಭೂತ ಅವಶ್ಯಕತೆಗಳು ಸಮಾನವಾಗಿ ಹಂಚಿಕೆ ಆಗಬೇಕು ಎಂದು ಬಯಸಿದ್ದರು. ಭಗತ್ ಸಿಂಗ್ ಕಂಡ ಕನಸು ನನಸಾಗುವ ನಿಟ್ಟಿನಲ್ಲಿ ಇಂದು ಸಂಕಲ್ಪಮಾಡಬೇಕಾಗಿದೆ ಎಂದು ತಿಳಿಸಿದರು.
ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಸಂಚಾಲಕಿ ಉಮಾ ಮಹೇಶ್ವರಿ ಮಾತನಾಡಿದರು. ಎಐಯುಟಿಯುಸಿ ಮುಖಂಡ ಅಣ್ಣಪ್ಪ, ಎಐಎಂಎಸ್ಎಸ್ ಸದಸ್ಯೆ ಗಾಯತ್ರಿ, ಸರೋಜ, ಕಾರ್ತಿಕ, ಹೇಮಂತ್, ವೀರೇಶ, ಅಮೋಘ, ಯಶವಂತ, ಅಭಿಲಾಷ್, ನೂರ್ ಪಾಶಾ ಇದ್ದರು. ಪೀರ್ ಸಾಬ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.