ADVERTISEMENT

ಮಸ್ಕಿ | ಪರಿಹಾರ ಕೊಟ್ಟು ಕೆಲಸ ಆರಂಭಿಸಿ: ರೈತರ ಪಟ್ಟು

ಬೆಳಗಾವಿ-ರಾಯಚೂರು ಭಾರತ ಮಾಲಾ ಹೆದ್ದಾರಿ ಕಾಮಗಾರಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:31 IST
Last Updated 18 ಜುಲೈ 2025, 6:31 IST
ಭಾರತ ಮಾಲಾ ಹೆದ್ದಾರಿ ನಡೆಯುವ ಮಸ್ಕಿ ತಾಲ್ಲೂಕಿನ ಗೋನ್ವಾರ ಸಮೀಪ ಗುರುವಾರ ರೈತರು ಕಾಮಗಾರಿಗೆ ಅಡ್ಡಿ ಪಡಿಸಿರುವುದು
ಭಾರತ ಮಾಲಾ ಹೆದ್ದಾರಿ ನಡೆಯುವ ಮಸ್ಕಿ ತಾಲ್ಲೂಕಿನ ಗೋನ್ವಾರ ಸಮೀಪ ಗುರುವಾರ ರೈತರು ಕಾಮಗಾರಿಗೆ ಅಡ್ಡಿ ಪಡಿಸಿರುವುದು   

ಮಸ್ಕಿ: ಭಾರತ ಮಾಲಾ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಗೋನ್ವಾರ ಗ್ರಾಮದ ಬಳಿ ನಡೆಯುತ್ತಿದ್ದ ಬೆಳಗಾವಿ – ರಾಯಚೂರು ಚತುಷ್ಪತ ಹೆದ್ದಾರಿ ಕಾಮಗಾರಿಗೆ ರೈತರು ಗುರುವಾರ ಬೆಳಿಗ್ಗೆಯಿಂದಲೇ ತಡೆ ಒಡ್ಡಿದ್ದಾರೆ. ಭೂ ಪರಿಹಾರ ಹಾಗೂ ಬೆಳೆ ಪರಿಹಾರ ನೀಡಿ ಕಾಮಗಾರಿ ಆರಂಭಿಸುವಂತೆ ರೈತರು ಪಟ್ಟು ಹಿಡಿದರು.

ಸ್ಥಳಕ್ಕೆ ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ಮಸ್ಕಿ ತಹಶೀಲ್ದಾರ್ ಮಲ್ಲಪ್ಪ ಯರಗೋಳ, ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ರೈತರ ಮನವೋಲಿಸುವ ಯತ್ನ ನಡೆಸಿದಚರು.

‌ರೈತರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಸ್ಥಳದಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾಯ್ದಿಟ್ಟ ಮೀಸಲು ಪಡೆ ಸೇರಿದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

ADVERTISEMENT

‘2023ರಲ್ಲಿಯೇ ಭಾರತ ಮಾಲಾ ಯೋಜನೆಯ ಕಾಮಗಾರಿಗೆ ಬೇಕಾದ ಭೂಮಿಯನ್ನು ಅವಾರ್ಡ್ ಮಾಡಲಾಗಿದೆ. ಜೆಎಂಸಿ ಮಾಡಿ ರೈತರ ಖಾತೆಗೆ ಹಣ ಜಮೆ ಮಾಡಿದ ನಂತರ ಕಾಮಗಾರಿ ಮಾಡಿ ಎಂದರೂ ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ಕೆಲಸ ಶುರು ಮಾಡಲು ಬಂದಿದ್ದಾರೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ’ ಎಂದು ರೈತ ಸಿದ್ದಲಿಂಗಪ್ಪ ಸಾಹುಕಾರ ತಿಳಿಸಿದ್ದಾರೆ.

ನಾವುಗಳು ಹೆದ್ದಾರಿ ವಿರೋಧಿಗಳಲ್ಲ, ನಮ್ಮ ಭೂಮಿಗೆ ನಿಯಮದ ಪ್ರಕಾರ ಹಣ ನೀಡಿ ಕಾಮಗಾರಿ ಮಾಡಿ ಎನ್ನುತ್ತಿದ್ದೇವೆ. ಆದರೆ ಪೊಲೀಸ್ ಬಲ ಉಪಯೋಗಿಸಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ಇದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ಗೋನ್ವಾರ, ಬಸಾಪೂರ ಸೇರಿ 50ಕ್ಕೂ ಹೆಚ್ಚು ರೈತರ ಜಮೀನಲ್ಲಿ ಭಾರತ ಮಾಲಾ ಹೆದ್ದಾರಿ ಹೋಗುತ್ತಿದ್ದು ಯಾರಿಗೆ ಪರಿಹಾರ ಬಂದಿಲ್ಲ ಎಂದು ಎಐಡಿವೈಒ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ ಹೇಳಿದ್ದಾರೆ.

ಈಗಾಗಲೇ ಜಮೀನಿನಲ್ಲಿ ತೊಗರಿ, ಸೂರ್ಯಕಾಂತಿ, ಹತ್ತಿ ಬೆಳೆ ಹಾಕಲಾಗಿದೆ. ಈ ಬೆಳೆಗೂ ಪರಿಹಾರವನ್ನು ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಭೂ ಸ್ವಾದೀನ ಇಲಾಖೆ ಅಧಿಕಾರಿ ಗುರುಸಿದ್ದಪ್ಪ ಸೇರಿದಂತೆ ಹೆದ್ದಾರಿ ಯೋಜನೆ ಅಧಿಕಾರಿಗಳು, ಕಂದಾಯ ಹಾಗೂ ಪೊಲೀಸ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ.

ರೈತರ ಭೂ ಪರಿಹಾರ ಹಣ ನ್ಯಾಯಾಲದಲ್ಲಿ ಜಮೆ ಮಾಡಲಾಗಿದೆ. ಅವರ ಖಾತೆಗಳಿಗೆ ಹಣ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು
ಮಲ್ಲಪ್ಪ ಯರಗೋಳ ತಹಶೀಲ್ದಾರ್ ಮಸ್ಕಿ

ಭದ್ರತೆಯಲ್ಲಿ ಕಾಮಗಾರಿ ಆರಂಭ ರೈತರು ಹೆದ್ದಾರಿ ಕಾಮಗಾರಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅವರ ಮನವೋಲಿಸುವ ಪ್ರಯತ್ನ ವಿಫಲವಾಗಿದೆ. ಅಧಿಕಾರಿಗಳು ಪೊಲೀಸ್ ಬೀಗಿ ಭದ್ರತೆಯಲ್ಲಿ ಕಾಮಗಾರಿ ಪುನರ್ ಆರಂಭಿಸಿದ್ದಾರೆ. ಅಡ್ಡಿ ಪಡಿಸಲು ಬಂದ ರೈತರನ್ನು ಕಾಮಗಾರಿ ನಡೆಯುವ ಸ್ಥಳದಿಂದ ಹೊರಗೆ ಕಳಿಸಿದ್ದಾರೆ‌. ಸಹಾಯಕ ಆಯುಕ್ತರು ತಹಶೀಲ್ದಾರ್ ಹಿರಿಯ ಪೊಲೀಸ್ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳದಲ್ಲಿ ಬಿಡಾರ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.