ADVERTISEMENT

ಬಾಕಿ ಬಿಲ್ ಪಾವತಿ, ಬಾಕಿ ಕೆಲಸ ಮಾಡಲು ಅನುಮತಿ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 15:49 IST
Last Updated 14 ಮಾರ್ಚ್ 2024, 15:49 IST
ಸಿಂಧನೂರಿನ ನೂತನ ರೈಲ್ವೆ ಸ್ಟೇಷನ್‍ಗೆ ಗುರುವಾರ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಭೇಟಿ ನೀಡಿ ವೀಕ್ಷಿಸಿ, ಗುತ್ತಿಗೆ ಪಡೆದ ಕಂಪನಿಯ ಸಿಬ್ಬಂದಿಯೊಂದಿಗೆ ಕಾಮಗಾರಿ ಕುರಿತು ಚರ್ಚಿಸಿದರು
ಸಿಂಧನೂರಿನ ನೂತನ ರೈಲ್ವೆ ಸ್ಟೇಷನ್‍ಗೆ ಗುರುವಾರ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಭೇಟಿ ನೀಡಿ ವೀಕ್ಷಿಸಿ, ಗುತ್ತಿಗೆ ಪಡೆದ ಕಂಪನಿಯ ಸಿಬ್ಬಂದಿಯೊಂದಿಗೆ ಕಾಮಗಾರಿ ಕುರಿತು ಚರ್ಚಿಸಿದರು   

ಸಿಂಧನೂರು: ರೈಲ್ವೆ ಇಲಾಖೆಯು ಬಾಕಿ ಬಿಲ್ ₹2.5 ಕೋಟಿ ತಕ್ಷಣ ಪಾವತಿಸಬೇಕು ಹಾಗೂ ಬಾಕಿ ಕೆಲಸ ಮಾಡಲು ಅನುಮತಿ ಕೊಡಬೇಕು, ವಿನಾಃಕಾರಣ ಕೆಲಸಕ್ಕೆ ಅಡೆಚಣೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರೈಲು ಉದ್ಘಾಟನೆ ದಿನವಾದ ಮಾ.15 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ರೈಲ್ವೆ ಸ್ಟೇಷನ್ ಕಟ್ಟಡ ನಿರ್ಮಾಣ ಗುತ್ತಿಗೆ ಪಡೆದ ಗುತ್ತಿಗೆದಾರರು, ಸಿಬ್ಬಂದಿ, ಕಾರ್ಮಿಕರು ಎಚ್ಚರಿಕೆ ನೀಡಿದರು.

ಗುರುವಾರ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ರೈಲ್ವೆ ಸ್ಟೇಷನ್‍ಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಗುತ್ತಿಗೆ ಕಂಪನಿಯ ಸೈಟ್ ಮ್ಯಾನೇಜರ್ ಕೃಷ್ಣ ‘ಪ್ಲಾಟ್ ಫಾರಂ ಫಿನಿಶಿಂಗ್, ಅಪ್ರೋಚ್ ರೋಡ್, ಸರ್ಕೂಲೇಟಿಂಗ್ ಏರಿಯಾ ಕಾಂಕ್ರೀಟ್, ಫಾರ್ಕಿಂಗ್ ಏರಿಯಾ, ಕಂಪೌಂಡ್ ವಾಲ್, ಡ್ರೈನ್, ಗಾರ್ಡನ್, ವಾಟರ್ ಸಪ್ಲೆ, ಅಂಡರ್ ಗ್ರೌಂಡ್ ಬಾಕ್ಸ್ ವಾಲ್ ಫಿನಿಶಿಂಗ್, ವಾಲ್ ಗ್ರಾನೈಟಿಂಗ್ ಮತ್ತಿತರ ಕೆಲಸಗಳು ಬಾಕಿಯಿವೆ’ ಎಂದು ತಿಳಿಸಿದರು.

ಸಿ.ಅಯ್ಯಪ್ಪರೆಡ್ಡಿ ಗುತ್ತಿಗೆ ಕಂಪನಿಯನ್ನು ದುರುದ್ದೇಶಪೂರಕವಾಗಿ ಕೆಲಸದ ಒಪ್ಪಂದದಿಂದ ವಜಾಗೊಳಿಸಲಾಯಿತು. ಆದರೆ, ನ್ಯಾಯಾಲಯದ ಆದೇಶ ಅಯ್ಯಪ್ಪರೆಡ್ಡಿ ಗುತ್ತಿಗೆ ಕಂಪನಿ ಪರವಾಗಿ ಬಂದದ್ದರಿಂದ ಆಗಸ್ಟ್ 2023 ರಿಂದ ಪುನಃ ಕೆಲಸ ಆರಂಭಿಸಲಾಯಿತು. ಇದನ್ನು ಅರಗಿಸಿಕೊಳ್ಳಲಾಗದೇ ರೈಲ್ವೆ ಇಲಾಖೆಯ ಸಿಇ ವೆಂಕಟೇಶ್ವರರಾವ್, ಡೆಪ್ಯೂಟಿ ಸಿಇ ದನೀಶ್ ಖಾನ್, ಐಒಡಬ್ಲೂ ಪ್ರವೀಣ್ ಅವರು ಬಾಕಿ ಬಿಲ್ ಪಾವತಿ ಮಾಡದೇ, ಇತರೆ ಕೆಲಸಗಳನ್ನು ಪ್ರಾರಂಭಿಸಲು ಅನುಮತಿ ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪೂರೈಕೆದಾರರಿಗೆ, ಯಂತ್ರೋಪಕರಣಗಳಿಗೆ ಹಾಗೂ ಕಾರ್ಮಿಕರಿಗೆ ಕೂಲಿ ಕೊಡಲು ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ರೈಲ್ವೆ ಇಲಾಖೆ ಬಾಕಿ ಬಿಲ್ ₹2.5 ಕೋಟಿ ಪಾವತಿ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ನಂತರ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ‘ಇಷ್ಟೆಲ್ಲ ಕೆಲಸಗಳು ಬಾಕಿ ಇದ್ದರೂ ಅವಸರದಲ್ಲಿ ರೈಲು ಸಂಚಾರ ಉದ್ಘಾಟನೆ ಮಾಡುತ್ತಿರುವುದರ ಹಿಂದಿನ ಉದ್ದೇಶವೇನು? ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿ, ಪ್ರಯಾಣಿಕರಿಗೆ ಸುಸಜ್ಜಿತ ಕಟ್ಟಡ, ಮೂಲಸೌಕರ್ಯ ಕಲ್ಪಿಸಿ, ಮುಖ್ಯರಸ್ತೆಯವರೆಗೆ ರಸ್ತೆ ನಿರ್ಮಾಣ ಮಾಡಿ ಲೋಕಸಭಾ ಚುನಾವಣೆಯ ನಂತರ ಅದ್ದೂರಿಯಾಗಿ ಉದ್ಘಾಟನೆ ಮಾಡುವುದು ಒಳ್ಳೆಯದು. ಅಯ್ಯಪ್ಪರೆಡ್ಡಿ ಗುತ್ತಿಗೆ ಕಂಪನಿಗೆ ಬಾಕಿ ಬಿಲ್ ಹಾಗೂ ಇನ್ನುಳಿದ ಕೆಲಸಗಳನ್ನು ಮಾಡಲು ಅನುಮತಿ ನೀಡುವಂತೆ ಸಿಇ, ಡೆಪ್ಯೂಟಿ ಸಿಇ ಅವರೊಂದಿಗೆ ಚರ್ಚಿಸಲಾಗುವುದು. ಇನ್ನುಳಿದ ಕೆಲಸ ಮಾಡಲು ಅನುಮತಿ ಕೊಡದಿದ್ದರೆ ಇಲಾಖೆ ಅಧಿಕಾರಿಗಳ ವಿರುದ್ಧ ಜನರೇ ರೊಚ್ಚಿಗೇಳುತ್ತಾರೆ’ ಎಂದು ಎಚ್ಚರಿಸಿದರು.

ತದನಂತರ ರೈಲ್ವೆ ಸ್ಟೇಷನ್ ಮಾಸ್ಟರ್ ಅಮರೇಂದ್ರ ಅವರಿಂದ ಹುಬ್ಬಳಿ, ಬೆಂಗಳೂರಿಗೆ ರೈಲು ಸಂಚಾರದ ವೇಳಾಪಟ್ಟಿಯ ಮಾಹಿತಿ ಪಡೆದುಕೊಂಡರು. ಗುತ್ತಿಗೆ ಕಂಪನಿಯ ಸೈಟ್ ಎಂಜನಿಯರ್ ಪೈಜುಲ್, ಮುಖಂಡರಾದ ಗಂಗಣ್ಣ ಡಿಶ್, ವೀರರಾಜು, ವೀರೇಶ ಅಂಗಡಿ ಸೇರಿದಂತೆ ಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.