ADVERTISEMENT

ಮೈಕೊರೆಯುವ ಚಳಿ: ದಿನವಿಡೀ ಶೀತಗಾಳಿ

ರಾಯಚೂರಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ದಾಖಲು

ಚಂದ್ರಕಾಂತ ಮಸಾನಿ
Published 5 ಜನವರಿ 2025, 5:46 IST
Last Updated 5 ಜನವರಿ 2025, 5:46 IST
ಸಿರವಾರ ಪಟ್ಟಣದಲ್ಲಿ ಅಂಗಡಿಗಳ ಮುಂದೆ ಶನಿವಾರ ಬೆಳಗಿನ ಜಾವ ಜನರು ಕಸಕ್ಕೆ ಬೆಂಕಿ ಹಚ್ಚಿ ಕಾಯಿಸಿಕೊಂಡರು/ ಚಿತ್ರ: ಕೃಷ್ಣ ಸಿರವಾರ
ಸಿರವಾರ ಪಟ್ಟಣದಲ್ಲಿ ಅಂಗಡಿಗಳ ಮುಂದೆ ಶನಿವಾರ ಬೆಳಗಿನ ಜಾವ ಜನರು ಕಸಕ್ಕೆ ಬೆಂಕಿ ಹಚ್ಚಿ ಕಾಯಿಸಿಕೊಂಡರು/ ಚಿತ್ರ: ಕೃಷ್ಣ ಸಿರವಾರ   

ರಾಯಚೂರು: ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಚಳಿ ಆವರಿಸಿದ್ದು, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಬೆಳಗಿನ ಜಾವ 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ದಿನವಿಡೀ ತಂಪಾದ ಗಾಳಿ ಬೀಸಿದೆ. ಇದರೊಂದಿಗೆ ಬಿಸಿಲೂ ಅಧಿಕವಾಗಿತ್ತು. ಹವಾಮಾನದಲ್ಲಿ ಉಂಟಾದ ಏರಿಳಿತದಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಆಸ್ತಮಾ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವವರು ಹೆಚ್ಚು ತೊಂದರೆ ಅನುಭವಿಸಿದರು. ಅನೇಕ ಜನರಲ್ಲಿ ಶೀತ–ಕೆಮ್ಮು ಹಾಗೂ ನೆಗಡಿ ಕಾಣಿಸಿಕೊಂಡಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಶೀತಕೆಮ್ಮು ಹಾಗೂ ನೆಗಡಿ ಸಂಬಂಧಿತ ರೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ರೋಗಿಗಳ ಸಂಖ್ಯೆ ಹೆಚ್ಚಿದೆ. ಬಿಸಿಲೂರಿನ ಜನ ಸುಡು ಬಿಸಿಲಿಗಿಂತಲೂ ಚಳಿಗೆ ಹೆಚ್ಚು ಭಯಪಡುವಂತಾಗಿದೆ.

ADVERTISEMENT

ಮನೆಗಳಿಗೆ ಪತ್ರಿಕೆಗಳನ್ನು ಹಾಕುವವರು, ಹಾಲು ವಿತರಕರು ಹಾಗೂ ತರಕಾರಿ ಮಾರಾಟಗಾರರು ಬೆಳಿಗ್ಗೆ ವಿಪರೀತ ಚಳಿಯಿಂದ ನಡಗುವಂತಾಯಿತು. ಚಳಿಯಿಂದ ರಕ್ಷಣೆ ಪಡೆಯಲು ಬಹುತೇಕರು ಸ್ವೆಟರ್‌, ಸ್ಕಾರ್ಪ್, ಮಫ್ಲರ್, ಟೊಪ್ಪಿಗೆ ಧರಿಸಿದ್ದರೂ ಪ್ರಮುಖ ವೃತ್ತಗಳಲ್ಲಿ ಹುಲ್ಲು, ಕಾಗದಂಥ ಕಸ ಸೇರಿಸಿ ಬೆಂಕಿ ಹಚ್ಚಿ ದೇಹ ಕಾಯಿಸಿಕೊಂಡರು.

ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವವರ ಸಂಖ್ಯೆ ಕಡಿಮೆ ಇತ್ತು. ಮಕ್ಕಳು ಸಹ ಸ್ವೆಟರ್‌ ಧರಿಸಿ ಶಾಲೆಗಳಿಗೆ ಹೋಗಿದ್ದು ಕಂಡು ಬಂತು. ನಗರದ ಕೇಂದ್ರ ಬಸ್‌ ನಿಲ್ದಾಣ, ರೈಲು ನಿಲ್ದಾಣ ಹಾಗೂ ತರಕಾರಿ ಸಗಟು ಮಾರುಕಟ್ಟೆ ಪ್ರದೇಶಗಳಲ್ಲಿ ಬೆಳಿಗ್ಗೆ ಜನ ಬೆಂಕಿ ಕಾಯಿಸಿಕೊಂಡ ನೋಟ ಕಂಡಿತು. ಚಹಾ ಅಂಗಡಿಗಳ ಮುಂದೆ ಗ್ರಾಹಕರು ಮುಗಿಬಿದ್ದಿದ್ದರು.

‘ರಾತ್ರಿ ವಿಪರೀತ ಚಳಿ ಹಾಗೂ ಬೆಳಿಗ್ಗೆ ಶೀತಗಾಳಿ ಇರುವ ಕಾರಣ ವೃದ್ಧರು, ಮಕ್ಕಳು ಹಾಗೂ ರೋಗಿಗಳು ಹೊರಗಡೆ ಹೆಚ್ಚು ಸಂಚರಿಸಬಾರದು. ತಂಪಾದ ಗಾಳಿಗೆ ಮೈ ಒಡ್ಡಿಕೊಳ್ಳಬಾರದು. ಬೆಚ್ಚಗಿನ ಉಡುಪುಗಳನ್ನು ಧರಿಸಬೇಕು. ಬೆಚ್ಚಗಿನ ನೀರು ಕುಡಿಯಬೇಕು. ಸಾಧ್ಯವಾದಷ್ಟು ಮನೆಯೊಳಗೆ ಇರಲು ಪ್ರಯತ್ನಿಸಬೇಕು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಂದ್ರ ಬಾಬು ಸಲಹೆ ನೀಡಿದ್ದಾರೆ.

‘ಇನ್ನೂ ನಾಲ್ಕು ದಿನ ಚಳಿ’

‘ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ನಾಲ್ಕು ದಿನಗಳ ವರೆಗೆ ರಾತ್ರಿ ವೇಳೆಯಲ್ಲಿ ಕನಿಷ್ಠ ತಾಪಮಾನ 12ರಿಂದ 14 ಡಿಗ್ರಿ ಸೆಲ್ಸಿಯಸ್‌ ಇಳಿಯುವ ಸಾಧ್ಯತೆ ಇದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಾಮೀಣ ಕೃಷಿ ಹವಾಮಾನ ಘಟಕದ ಮುಖ್ಯಸ್ಥ ಶಾಂತಪ್ಪ ತಿಳಿಸಿದ್ದಾರೆ. ‘2011ರ ಜನವರಿ 11ರಂದು ರಾಯಚೂರಿನಲ್ಲಿ 7.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. 15 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ’ ಎಂದಿದ್ದಾರೆ. ವಾತಾವರಣದಲ್ಲಿ ತಾಪಮಾನ ಕುಸಿಯುತ್ತಿರುವ ಕಾರಣ ಬೆಳೆಗಳಲ್ಲಿ ಮೊಗ್ಗು ಹಾಗೂ ಕಾಯಿ ಉದುರುವ ಸಾಧ್ಯತೆ ಇದೆ. ಹೀಗಾಗಿ 0.25 ಮಿಲಿ ಲೀಟರ್‌ ಫ್ಲಾನೋಪಿಕ್ಸ್ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ‘ರಾತ್ರಿ ಸಮಯದಲ್ಲಿ ಇಬ್ಬನಿ ಬೀಳುತ್ತಿರುವುದರಿಂದ ಕಟಾವು ಮಾಡಿ ಬಿಸಿಲಿಗೆ ಒಣ ಹಾಕಿದ ಧಾನ್ಯಗಳನ್ನು ರಾತ್ರಿ ಸಮಯದಲ್ಲಿ ಹೊದಿಕೆ ಹಾಕಿ ಮುಚ್ಚಿಡಬೇಕು’ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.