ADVERTISEMENT

ಕೊರೊನಾ ಸಾಮಗ್ರಿ ಖರೀದಿಯಲ್ಲಿ ಲೂಟಿ: ಬಸನಗೌಡ ಬಾದರ್ಲಿ ಆರೋಪ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 7:24 IST
Last Updated 25 ಜುಲೈ 2020, 7:24 IST
ಸಿಂಧನೂರಿನ ಯುವ ಕಾಂಗ್ರೆಸ್ ಕಾರ್ಯಲಯದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಸಿಂಧನೂರಿನ ಯುವ ಕಾಂಗ್ರೆಸ್ ಕಾರ್ಯಲಯದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.   

ಸಿಂಧನೂರು: ರಾಜ್ಯದಲ್ಲಿ ಕೊರೊನಾದಿಂದ ಜನತೆ ಭಯದ ವಾತಾವರಣದಲ್ಲಿ ನಲುಗಿದ್ದಾರೆ. ಆದರೆ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯು ಕೊರೊನಾ ಸಾಮಗ್ರಿಗಳ ಖರೀದಿಯಲ್ಲಿ ಹಣ ಲೂಟಿ ಮಾಡಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಆರೋಪಿಸಿದರು.

ಶುಕ್ರವಾರ ಯುವ ಕಾಂಗ್ರೆಸ್‍ನಿಂದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಿಂಧನೂರು ತಾಲ್ಲೂಕಿನಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಪ್ರಸ್ತುತ 150ಕ್ಕೂ ಹೆಚ್ಚು ಪ್ರಕಣರಗಳು ತಾಲ್ಲೂಕಿನಾದ್ಯಂತ ಇವೆ. ಆದರೆ, ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಧೈರ್ಯ ತುಂಬುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ADVERTISEMENT

ಕೊರೊನಾ ಹಿಮ್ಮೆಟ್ಟಿಸಲು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸೂಚನೆಯಂತೆ ಯುವ ಕಾಂಗ್ರೆಸ್ ರಾಜ್ಯದಾದ್ಯಂತ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಯುವ ಕಾಂಗ್ರೆಸ್ ನಿಂದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮೂವರನ್ನು ಮತ್ತು ನಗರದ ವಾರ್ಡಗಳಲ್ಲಿ ಇಬ್ಬರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಇವರಿಗೆ ಪಿಪಿಇ ಕಿಟ್, ಉಷ್ಣಮಾಪಕ ಫಲ್ಸ್ ಅಕ್ಸಿಮೀಟರ್, ಸ್ಯಾನಿಟೈಜರ್ ಫೇಸ್ ಸೈಡ್ಲ್ ನೀಡಲಾಗುವುದು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಪ್ರತಿ ಮನೆ ಮನೆಗೆ ತೆರಳಿ ಥರ್ಮೋಮೀಟರ್ ಸಹಾಯದಿಂದ ಜ್ವರ ಪರೀಕ್ಷಿಸಲಾಗುವುದು. ತಾಲ್ಲೂಕ ಆಡಳಿತದ ಸಹಯೋಗದೊಂದಿಗೆ ತಾಲ್ಲೂಕಿನ ಎಲ್ಲಾ ಗ್ರಾಮಗಳ ಜನರಿಗೆ ಕೊರೊನಾ ಭೀತಿ ಹೋಗಲಾಡಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಸ್ಲೈಡ್ ಮೂಲಕ ಕೆಪಿಸಿಸಿ ಆರೋಗ್ಯ ವಿಭಾಗದ ನುರಿತ ವೈದ್ಯರು ಹಾಗೂ ಸಿಂಧನೂರು ತಾಲ್ಲೂಕಿನ ಹಿರಿಯ ವೈದ್ಯ ಡಾ.ಚಿದಾನಂದ ಗೌಡ ಅವರ ಪುತ್ರ ಡಾ.ಅಂಬಣ್ಣ ಗೌಡ ಮಾತನಾಡಿ ಕೊರೊನಾ ಒಂದು ಭಯಾನಕ ರೋಗವಲ್ಲ. ಜಾಗೃತಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಬದುಕಿದರೆ ರೋಗ ಸಮಿಪಕ್ಕೂ ಸುಳಿಯಲಾರದು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಬಸವ ಉಪ್ಪಳ, ನಗರಸಭೆ ಸದಸ್ಯರಾದ ದತ್ತುರಾವ್, ಚಂದ್ರುಗೌಡ ಮೇಟಿ, ಅಲಂಬಾಶಾ, ಇಲಿಯಾಸ್ ಪಟೇಲ್, ಸುರೇಶ ಜಾಧವ್, ನಬೀಸಾಬ್, ಮುಖಂಡರಾದ ವೆಂಕಟೇಶ ರಾಗಲಪರ್ವಿ, ಜಹೀರ್ ಉಲ್ಲಾ ಹಸನ್, ಶಿವಕುಮಾರ್ ಜವಳಿ, ಶರಣಯ್ಯ ಕೋಟೆ, ವೀರರಾಜು, ಯುವ ಕಾಂಗ್ರೆಸ್ ತಾಲೂಕ ಅಧ್ಯಕ್ಷ ಖಾಜಾಹುಸೇನ್ ರೌಡಕುಂದಾ, ಮಹಿಳಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ ಬಸನಗೌಡ, ಸುಜಾತ ಚನ್ನಬಸವಸ್ವಾಮಿ, ಉಪಾಧ್ಯಕ್ಷೆ ಸುಮಂಗಲ ಬಸವರಾಜ, ಮುಂಚೂಣಿ ಘಟಕದ ಅಧ್ಯಕ್ಷರುಗಳಾದ ಶರಣಬಸವ ವಕೀಲರು, ರಾಮಣ್ಣ ಬೆಳಗುರ್ಕಿ, ನಾಗರಾಜ್ ಕೌತಾಳ, ಅಂಬರೀಶ್ ಬಾಗೋಡಿ, ಮಲ್ಲಯ್ಯ ನಾಯಕ್, ನಿರುಪಾದಿ ದೇವಿಕ್ಯಾಂಪ್, ಆದಿಶೇಷ, ಮೇಸ್ತ್ರಿ ನೂರ್ ಮೊಹಮ್ಮದ್, ಮುನ್ನಾ, ಜಾವಿದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.