ADVERTISEMENT

ಬ್ರಿಟಿಷರ ಗುಲಾಮರಾಗಿದ್ದ ಬಿಜೆಪಿಗರು: ಬಿ.ವಿ. ನಾಯಕ ವಾಗ್ದಾಳಿ

ರಾಯಚೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 13:21 IST
Last Updated 13 ಆಗಸ್ಟ್ 2022, 13:21 IST
ಮಸ್ಕಿ ತಾಲ್ಲೂಕಿನ ಹೊಗರನಾಳ ಗ್ರಾಮದಲ್ಲಿ ಶನಿವಾರ ಸ್ವಾತಂತ್ರ್ಯದ ಕಡೆಗೆ ಹಳ್ಳಿ ನಡಿಗೆ ಕಾರ್ಯಕ್ರಮ ಪಾದಯಾತ್ರೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ನಾಯಕ ಮಾತನಾಡಿದರು
ಮಸ್ಕಿ ತಾಲ್ಲೂಕಿನ ಹೊಗರನಾಳ ಗ್ರಾಮದಲ್ಲಿ ಶನಿವಾರ ಸ್ವಾತಂತ್ರ್ಯದ ಕಡೆಗೆ ಹಳ್ಳಿ ನಡಿಗೆ ಕಾರ್ಯಕ್ರಮ ಪಾದಯಾತ್ರೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ನಾಯಕ ಮಾತನಾಡಿದರು   

ಮಸ್ಕಿ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಬ್ರಿಟಿಷರ ಗುಲಾಮರಾಗಿದ್ದರು. ಅವರಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಾಗಿಲ್ಲ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ. ನಾಯಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ತಾಲ್ಲೂಕಿನ ಹೊಗರನಾಳದಲ್ಲಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಶನಿವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯದ ಕಡೆ ಹಳ್ಳಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಒಬ್ಬ ಮೋಸಗಾರ. ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಮಾಧ್ಯಮಗಳನ್ನು ಖರೀದಿಸಿ ಅವುಗಳಿಂದ ಪ್ರಚಾರ ಪಡೆಯುತ್ತಿದ್ದಾರೆ. ಮೋದಿಯ ಬಣ್ಣದ ಮಾತುಗಳಿಗೆ ದೇಶದ ಜನ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಅನೇಕರು ತ್ಯಾಗಮಾಡಿ ನಮಗೆ ಸ್ವಾತಂತ್ರ್ಯ ‌ತಂದು‌ಕೊಟ್ಟಿದ್ದಾರೆ. ಮಹಾತ್ಮ ಗಾಂಧಿ ಹುಟ್ಟು ಹಾಕಿದ ಕಾಂಗ್ರೆಸ್ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಸ್ವಾತಂತ್ರ್ಯ ತಂದು ಕೊಟ್ಟಿದೆ ಎಂದರು.

ನೆಹರೂ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ಪಂಚವಾರ್ಷಿಕ ಯೋಜನೆಗಳ ಮೂಲಕ‌ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ. ಅನೇಕ ಆಣೆಕಟ್ಟುಗಳು ನಿರ್ಮಾಣಗೊಂಡವು. ಇವತ್ತು ದೇಶ ಇಷ್ಟೊಂದು ಅಭಿವೃದ್ಧಿಯಾಗಿ ವಿಶ್ವದ ಗಮನ ಸೆಳೆದಿದೆ ಎಂದು ಅದು ಕಾಂಗ್ರೆಸ್‌ನ ಕೊಡುಗೆಯಿಂದ ಹೊರತು ಬಿಜೆಪಿಯಿಂದ ಅಲ್ಲ ಎಂದರು.

ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದ 8 ವರ್ಷಗಳಲ್ಲಿ ದೊಡ್ಡ ದೊಡ್ಡ ಕಂಪನಿಗಳ ₹ 10 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಆದರೆ, ಇವರಿಗೆ ರೈತರ ಹಾಗೂ ಬಡ ಕೂಲಿ ಕಾರ್ಮಿಕರ ಸಾಲ ಮನ್ನಾ ಮಾಡಲು ಆಗುತ್ತಿಲ್ಲ ಎಂದು ಹೇಳಿದರು

ಶಾಸಕ ಆರ್.ಬಸನಗೌಡ ತುರ್ವಿಹಾಳ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಕೆಪಿಸಿಸಿ ಸದಸ್ಯ ಎಚ್. ಬಿ.ಮುರಾರಿ, ಎ.ವಂಸತಕುಮಾರ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ಮೈಬೂಸಾಬ ಮುದ್ದಾಪೂರ, ಬಸವರಾಜ ಎಂ. ಯದ್ದಲದಿನ್ನಿ, ಮಲ್ಲನಗೌಡ ಗುಂಡಾ, ಸಿದ್ದನಗೌಡ ಮಾಟೂರು, ಮಲ್ಲಯ್ಯ ಬಳ್ಳಾ, ಕೃಷ್ಣ ಚಿಗರಿ, ಸುರೇಶ ಬ್ಯಾಳಿ ಯುತ್ ಕಾಂಗ್ರೆಸ್ ತಾಲ್ಲೂಕ ಅಧ್ಯಕ್ಷ ಹನುಮೇಶ ಬಾಗೋಡಿ ಸೇರಿ ಅನೇಕ ಮುಖಂಡರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪಾದಯಾತ್ರೆಯಲ್ಲಿ ಕಣಿ ಹಲಗೆ, ಡೊಳ್ಳು ಕುಣಿತ, ಹಗಲು ವೇಷಗಾರರು, ಹಲಗೆ ಮೇಳ ಸೇರಿದಂತೆ ವಿವಿಧ ಜಾನಪದ ತಂಡಗಳು ಪಾಲ್ಗೊಂಡಿದ್ದವು. ಪಾದಯಾತ್ರೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.