ರಾಯಚೂರು: ಶುಕ್ರವಾರ ಸಂಜೆ 4 ಗಂಟೆಗೆ ಶಕ್ತಿನಗರದ ಹೆಲಿಪ್ಯಾಡ್‌ನಲ್ಲಿ ಮೂರು ಕಡೆ ಬಾಂಬ್ ಸ್ಟೋಟಗೊಂಡಿತು. ಆರ್‌ಟಿಪಿಎಸ್‌ನಲ್ಲಿ ಸುಧೀರ್ಘ ಸೈರನ್ ಮೊಳಗುತ್ತಿದ್ದಂತೆಯೇ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ರಕ್ಷಣೆಗೆ ಮುಂದಾದರು. ಬಾಂಬ್ ಸ್ಟೋಟದಲ್ಲಿ ಗಾಯಗೊಂಡವರನ್ನು ತಕ್ಷಣ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರು.
ಹೌದು! ಶಕ್ತಿನಗರದ ಆರ್‌ಟಿಪಿಎಸ್ ಆವರಣದಲ್ಲಿರುವ ಹ್ಯಾಲಿಪ್ಯಾಡ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ರಕ್ಷಣಾ ಪಡೆಗಳ ಸಿಬ್ಬಂದಿ ಯುದ್ಧ ಸನ್ನಿವೇಶ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲು ನಾಗರಿಕ ರಕ್ಷಣೆ ಸಿದ್ಧತಾ ಅಣಕು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯವಿದು.
ಬಾಂಬ್ ದಾಳಿಯ ನಂತರ ಸೈರನ್ ಮೊಳಗಿದಾಗ ಯಾವ ರೀತಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು? ಈ ವೇಳೆ ರಕ್ಷಣಾ ಕಾರ್ಯಾಚರಣೆ ಯಾವ ರೀತಿ ನಡೆಯುತ್ತದೆ ಎಂದು ಸಾರ್ವಜನಿಕರಿಗೆ ವಿವರಿಸಲಾಯಿತು. ದಾಳಿಯಾದ ಸಂದರ್ಭದಲ್ಲಿ ಗಾಯಗೊಂಡವರನ್ನು ಯಾವ ರೀತಿಯಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ, ಮೃತದೇಹಗಳನ್ನು ಹೇಗೆ ಸಾಗಿಸಲಾಗುತ್ತದೆ ಎನ್ನುವುದರ ಬಗ್ಗೆ ಕಾರ್ಯಾಚರಣೆ ನಡೆಸಲಾಯಿತು.
ಅಗ್ನಿಶಾಮಕ ಸೇವೆ, ರಕ್ಷಣಾ ಸೇವೆ, ವೈದ್ಯಕೀಯ ಸೇವೆ, ಶವ ವಿಲೇವಾರಿ ಕ್ರಮಗಳು, ಸರ್ಕಾರಿ ಸಿಬ್ಬಂದಿ, ವಾರ್ಡನ್ ಮತ್ತು ಸ್ವಯಂ ಸೇವಕರಿಗೂ ತರಬೇತಿ ನೀಡಲಾಯಿತು. ನಾಗರಿಕ ರಕ್ಷಣಾ ನಿಯಂತ್ರಣ ಕೊಠಡಿ ಹಾಗೂ ನಾಗರಿಕ ರಕ್ಷಣಾ ಸ್ ಸೈರನ್ ಗಳನ್ನು ಕಾರ್ಯಗತಗೊಳಿಸಲಾಯಿತು.
ನಾಗರಿಕ ಪೊಲೀಸರು, ಜಿಲ್ಲಾ ಸಶಸ್ತ್ರಪಡೆ, ಗೃಹ ರಕ್ಷಕ ದಳ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, (ಸಿಐಎಸ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಎನ್‌ಸಿಸಿ ಕೆಡೆಟ್‌ಟಗಳು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿ, ‘ಕೇಂದ್ರ ಸರ್ಕಾರದ ನಿರ್ದೇಶನದಂತೆ ಆರ್‌ಟಿಪಿಎಸ್‌ನಲ್ಲಿ ನಾಗರಿಕ ರಕ್ಷಣೆ ಸಿದ್ಧತಾ ಅಣಕು ಕಾರ್ಯಾಚರಣೆ ನಡೆಸಲಾಗಿದೆ. ಸೈರನ್ ಮೊಳಗಿದ ತಕ್ಷಣ ಸಾರ್ವಜನಿಕರು ಗಾಬರಿಗೊಳ್ಳುವ ಅಗತ್ಯವಿಲ್ಲ. ಆದರೆ, ಯುದ್ಧದಂತಹ ಸನ್ನಿವೇಶದಲ್ಲಿ ಬಾಂಬ್ ದಾಳಿ ಅಥವಾ ವಿಪ್ಪತ್ತು ಸಂದರ್ಭದಲ್ಲ ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಮಾಹಿತಿ ನೀಡಬೇಕು‘ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗರಿಕ ರಕ್ಷಣೆ ಸಿದ್ಧತಾ ಅಣಕು ಕಾರ್ಯಾಚರಣೆಯ ಬಗ್ಗೆ ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡ್ವೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಲೆ, ರಾಯಚೂರು ತಹಶೀಲ್ದಾರ್, ಸುರೇಶ ವರ್ಮಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.