ADVERTISEMENT

ರಾಯಚೂರು | ಪುಸ್ತಕಗಳು ಆಪ್ತ ಗೆಳೆಯನಿದ್ದಂತೆ: ಪ್ರೊ. ಶಿವಾನಂದ ಕೆಳಗಿನಮನಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 4:34 IST
Last Updated 20 ಜನವರಿ 2026, 4:34 IST
   

ರಾಯಚೂರು: ‘ಪುಸ್ತಕಗಳ ಜ್ಞಾನವಿಲ್ಲದೇ ಹೋಗಿದ್ದರೆ ಜಗತ್ತು ಕತ್ತಲಿನಲ್ಲಿರುತ್ತಿತ್ತು. ಪುಸ್ತಕಗಳು ಹೊಸ ತಲೆ ತಲೆಮಾರುಗಳಿಗೆ ಕೊಂಡೊಯ್ಯುವ ಹಾಗೂ ಜಗತ್ತಿನ ಎಲ್ಲಾ ಜ್ಞಾನವನ್ನು ತಿಳಿಸುವ ಜ್ಞಾನ ದೀವಿಗೆಗಳಾಗಿವೆ’ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಅಭಿಪ್ರಾಯಪಟ್ಟರು.

ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದ ಆವರಣದಲ್ಲಿ ಭಾನುವಾರ ಕಲಾ ಸಂಕುಲ ಸಂಸ್ಥೆಯಿಂದ ಆಯೋಜಿಸಿದ್ದ ‘ಪುಸ್ತಕ ಸಂತೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ ಪುಸ್ತಕಗಳು ಪ್ರತಿಯೊಬ್ಬರಿಗೂ ಆಪ್ತ ಗೆಳೆಯನಿದ್ದಂತೆ, ಜ್ಞಾನದ ಭಂಡಾರವಾಗಿವೆ. ಪೀಳಿಗೆಯಿಂದ ಪೀಳೆಗೆಗೆ ಜ್ಞಾನವನ್ನು ಧಾರೆ ಎರೆಯುತ್ತವೆ. ಆಯಾ ಕಾಲದ ಚರಿತ್ರೆಯನ್ನು ವಿವರಿಸುತ್ತವೆ. ಜಾಗತಿಕ ಮಟ್ಟದ ಜ್ಞಾನ, ಸಂಸ್ಕಾರ ಮತ್ತು ಸಂಸ್ಕೃತಿಯ ಅನಾವರಣಗೊಳಿಸುತ್ತವೆ. ಹೀಗಾಗಿ ಪುಸ್ತಕಗಳು ಮನುಷ್ಯ
ಗಳಿಸಿರುವ ಅತ್ಯಂತ ದೊಡ್ಡ ಸಂಪತ್ತಾಗಿದೆ’ ಎಂದು ಬಣ್ಣಿಸಿದರು.

‘ಮನೆಯಲ್ಲಿ ಪುಸ್ತಕಗಳಿದ್ದರೆ ಸಂಸ್ಕಾರ ನೆಲೆಯೂರುತ್ತದೆ. ಮಕ್ಕಳಲ್ಲಿ ಉತ್ತಮ ನಡುವಳಿಕೆಗಳು ಬೆಳೆಯುತ್ತವೆ. ಇಂದಿನ ಯುವ ಪೀಳಿಗೆ ಪುಸ್ತಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನ ಮುಂದಿನ ತಲೆಮಾರುಗಳಿಗೆ ಹಂಚಿಹೋಗಬೇಕು. ಪುಸ್ತಕ ಸಂತೆ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ಕಲಾ ಸಂಕುಲ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು’ ಎಂದು ಹೇಳಿದರು.

ಸಾಹಿತಿಗಳಾದ ಅಯ್ಯಪ್ಪಯ್ಯ ಹುಡಾ, ಬಾಬು ಭಂಡಾರಿಗಲ್, ಚಿದಾನಂದ ಸಾಲಿ, ವೆಂಕಟೇಶ ಬೇವಿನಬೆಂಚಿ, ಈರಣ್ಣ ಬೆಂಗಾಲಿ, ಹೋರಾಟಗಾರ ಜಾನ್ ವೆಸ್ಲಿ, ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ,ಕಾರ್ಯಕ್ರಮ ಆಯೋಜಕ ಮಾರುತಿ ಬಡಿಗೇರ, ಕಲಾವಿದ ಅಮರೇಗೌಡ, ಸೈಯದ್ ವಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.