ರಾಯಚೂರು: ‘ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ರಾಜ್ಯದ ನಾಲ್ವರಿಗೆ ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಜನತೆಯ ಬಗ್ಗೆ ಕಾಳಜಿ ಇದ್ದರೆ 24 ಗಂಟೆಯೊಳಗೆ ಆಲಮಟ್ಟಿ ಜಲಾಯಶದ ಎತ್ತರ ಹೆಚ್ಚಿಸಲು ಕೇಂದ್ರದಿಂದ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಒತ್ತಾಯಿಸಿದರು.
‘ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಕುಮಾರಸ್ವಾಮಿ, ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರು ದಿನ ಬೆಳಗಾದರೆ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವುದು ಬಿಟ್ಟರೆ ಏನನ್ನೂ ಮಾಡುತ್ತಿಲ್ಲ’ ಎಂದು ನಗರದಲ್ಲಿ ಶನಿವಾರ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷ ನಾಲ್ಕು ತಿಂಗಳು ಕಳೆದಿವೆ. ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇಂದ್ರದಲ್ಲಿ ರಾಜ್ಯದ ನಾಲ್ವರು ಸಚಿವರಿದ್ದರೂ ಕರ್ನಾಟಕದ ಅಭಿವೃದ್ಧಿ ಕುರಿತು ಮಾತನಾಡುತ್ತಿಲ್ಲ’ ಎಂದು ಟೀಕಿಸಿದರು.
‘ವಿಜಯೇಂದ್ರ ಹಾಗೂ ಆರ್.ಅಶೋಕ ಅವರಿಗೆ ನಾಚಿಕೆ ಇಲ್ಲ. ಅವರು ಸರ್ಕಾರದ ವಿರುದ್ಧ ಬಳಸುವ ಭಾಷೆಯೂ ಕೀಳುಮಟ್ಟದ್ದಾಗಿದೆ. ರಾಜ್ಯದ ಪರವಾಗಿ ನಿಲ್ಲಬೇಕಾದ ಬಿಜೆಪಿ ನಾಯಕರು ದಿನ ಬೆಳಗಾದರೆ ವಿವಾದ ಸೃಷ್ಟಿಸುವಲ್ಲಿಯೇ ಕಾಲ ಕಳೆಯುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಜಮೀನು ಕಳೆದುಕೊಳ್ಳಲಿರುವ ರೈತರಿಗೂ ತೃಪ್ತಿಕರವಾಗುವ ರೀತಿಯಲ್ಲಿ ಪರಿಹಾರ ಪ್ರಕಟಿಸಿದೆ. ಒಟ್ಟು 25 ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಆದರೆ, ಜಲಾಶಯದ ಎತ್ತರ ಹೆಚ್ಚಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವಲ್ಲಿ ಮೀನಮೇಷ ಮಾಡುತ್ತಿದೆ’ ಎಂದು ಟೀಕಿಸಿದರು.
‘ಮಹಾರಾಷ್ಟ್ರದಿಂದ ರಾಜಕೀಯ’: ‘ಕೃಷ್ಣಾ ನದಿ ಮೇಲ್ಭಾಗದಲ್ಲಿರುವ ಮಹಾರಾಷ್ಟ್ರಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ ಎನ್ನುವ ಒಂದೇ ಕಾರಣಕ್ಕೆ ಆಲಮಟ್ಟಿ ಜಲಾಶಯ ಎತ್ತರಿಸುವ ವಿಷಯದಲ್ಲಿ ಮಹಾರಾಷ್ಟ್ರದ ಬಿಜೆಪಿ ಮುಖ್ಯಮಂತ್ರಿ ಫಡಣವೀಸ್ ಆಕ್ಷೇಪ ವ್ಯಕ್ತಪಡಿಸಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಆಂಧ್ರಪ್ರದೇಶದ ಮುಖ್ಯಮಂತ್ರಿ ಈವರೆಗೆ ಯಾವುದೇ ಉತ್ತರ ಕೊಟ್ಟಿಲ್ಲ. ಕೇಂದ್ರ ಅಧಿಸೂಚನೆ ಹೊರಡಿಸಿದರೆ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ಜಿಲ್ಲೆಯ ಹಳೆಯ ಯೋಜನೆಗಳಿಗೆ ಪುನಶ್ಚೇತನ ನೀಡಲಾಗುವುದು. ರಾಯಚೂರು ತಾಲ್ಲೂಕಿನ ಡಿ.ರಾಂಪುರ ಸಮೀಪ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ.– ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ ಸಚಿವ
‘₹140 ಕೋಟಿ ಅನುದಾನ ಕಡಿತ’
‘ಕರ್ನಾಟಕದ 14 ಜಿಲ್ಲೆಗಳ 1199 ಗ್ರಾಮ ಪಂಚಾಯಿತಿಗಳಲ್ಲಿ ಅಟಲ್ ಭೂಜಲ ಯೋಜನೆ ಜಾರಿಗೊಳಿಸಲು ಕೇಂದ್ರ ₹ 2 ಸಾವಿರ ಕೋಟಿ ನಿಗದಿಪಡಿಸಿತ್ತು. ಇದರಲ್ಲಿ ಕೇವಲ ₹ 1300 ಕೋಟಿ ಒದಗಿಸಿದೆ. ₹ 60 ಕೋಟಿ ಬಾಕಿ ಉಳಿಸಿಕೊಂಡಿದೆ. ಸಿಬ್ಬಂದಿ ವೇತನ ಸಹ ಕೊಟ್ಟಿಲ್ಲ. ₹140 ಕೋಟಿ ಅನುದಾನ ಕಡಿತಗೊಳಿಸಿದೆ’ ಎಂದು ಸಚಿವ ಬೋಸರಾಜು ಅಸಮಾಧಾನ ಹೊರ ಹಾಕಿದರು.
‘ಅಂತರ್ಜಲಮಟ್ಟ ಹೆಚ್ಚಿಸಲು ಅಟಲ್ ಭೂಜಲ ಯೋಜನೆ ಅಡಿಯಲ್ಲಿ ಕೆರೆ ಚೆಕ್‌ಡ್ಯಾಂ ಹಾಗೂ ಬ್ಯಾರೇಜ್ ನಿರ್ಮಾಣಕ್ಕೆ ಒತ್ತು ಕೊಡಲಾಗಿತ್ತು. ಅತಿ ಹೆಚ್ಚು ಅಂತರ್ಜಲ ಕುಸಿತವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಯೋಜನೆ ಸ್ಥಗಿತಗೊಳಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದೆ’ ಎಂದು ವಿವರಿಸಿದರು.
‘ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲಮಟ್ಟ 1500 ಅಡಿ ಆಳಕ್ಕೆ ಕುಸಿದಿತ್ತು. ಜಲ ಸಂರಕ್ಷಣೆ ಕಾರ್ಯಕ್ರಮದ ನಂತರ 150 ಅಡಿಯಲ್ಲಿ ನೀರು ಲಭಿಸುತ್ತಿದೆ. ರಾಜ್ಯದಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ಯೋಜನೆಗಳು ಮುಂದುವರಿಯಲಿವೆ’ ಎಂದು ತಿಳಿಸಿದರು.
‘ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸಿರಪುರ ತಾಲ್ಲೂಕು ಜಲ ಸಂರಕ್ಷಣಾ ಪ್ರಯತ್ನಗಳ ಮೂಲಕ ಅಭಿವೃದ್ಧಿ ಸಾಧಿಸಿದೆ. ಸೆ.23 ಹಾಗೂ 24ರಂದು ಶಾಸಕರನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ನಂತರ ರಾಜ್ಯದಲ್ಲೂ ಸಿರಪುರ ಮಾದರಿಯಲ್ಲಿ ಜಲ ಸಂರಕ್ಷಣಾ ಕ್ರಮ ಕೈಗೊಳ್ಳಲು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.