ADVERTISEMENT

’ಸಮ ಸಮಾಜಕ್ಕೆ ಶ್ರಮಿಸಿದ ನಾರಾಯಣಗುರು’

ಜಿಲ್ಲೆಯ ವಿವಿಧೆಡೆ ಬ್ರಹ್ಮಶ್ರೀ ನಾರಾಯಣಗುರು ಜಯಂತಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 12:42 IST
Last Updated 10 ಸೆಪ್ಟೆಂಬರ್ 2022, 12:42 IST
ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಪ್ರೋತ್ಸಾಹಿಸಿದರು.
ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಪ್ರೋತ್ಸಾಹಿಸಿದರು.   

ರಾಯಚೂರು: ಸಮಾಜದಲ್ಲಿನ ಅಸಮಾನತೆ, ಕಂದಾಚಾರ, ಅನಿಷ್ಠ ಪದ್ದತಿಗಳನ್ನು ತೊಡೆದು ಹಾಕಲು ಬ್ರಹ್ಮಶ್ರೀ ನಾರಾಯಣಗುರು ಶ್ರಮಿಸಿದ್ದಲ್ಲದೆ ಸಮಸಮಾಜ ನಿರ್ಮಾಣಕ್ಕೆ ಜಾಗೃತಿ ಮೂಡಿಸಿ ಮಹಾತ್ಮರಾಗಿದ್ದಾರೆ ಎಂದು ಸಿಂಧನೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್ ಶಿವರಾಜ ಹಟ್ಟಿ ಹೇಳಿದರು.

ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕೇರಳದ ಬಸವಣ್ಣರೆಂದೇ ಖ್ಯಾತಿ ಪಡೆದ ಬ್ರಹ್ಮಶ್ರೀ ನಾರಾಯಣಗುರುಗಳ ವಿಚಾರಗಳು ಜಗತ್ತಿನಾದ್ಯಾಂತ ಪ್ರಭಾವಿಸಿವೆ. ಹಿಂದುಳಿದ ವರ್ಗಗಳಿಗೆ ದೇವಸ್ಥಾನ ಪ್ರವೇಶ ಕಲ್ಪಿಸದ ಕಾಲದಲ್ಲಿ ಸ್ವತಃ ದೇವಸ್ಥಾನಗಳನ್ನು ನಿರ್ಮಿಸಿ ಎಲ್ಲಾ ವರ್ಗದವರಿಗೂ ದೇವಸ್ಥಾನ ಪ್ರವೇಶ ಕಲ್ಪಿಸಿದ್ದರು. ತುಳಿತಕ್ಕೊಳಗಾದ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಜೊತೆಗೆ ಮೂಢನಂಬಿಕೆ, ಕಂದಾಚಾರ, ಅಸಮಾನತೆ ತೊಡೆದು ಹಾಕಲು ಶಿಕ್ಷಣಮಂತ್ರ ಬೋಧಿಸಿ ಜಾಗೃತಿ ಮೂಡಿಸಿದ್ದರು ಎಂದು ತಿಳಿಸಿದರು.

ADVERTISEMENT

ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಎಲ್ಲರನ್ನೂ ಒಗ್ಗೂಡಿಸಲು ನಾರಾಯಣಗುರುಗಳು ದೇವಸ್ಥಾನ ನಿರ್ಮಿಸಿ ಜಾಗೃತಿ ಮೂಡಿಸಲು ಮುಂದಾಗಿದ್ದರು. ಆದರೆ ಅವರ ವಿಚಾರ, ಭೋಧನೆಯನ್ನು ಬದಿಗಿಟ್ಟು ಅವರ ಅನುಯಾಯಿಗಳು ಕೇವಲ ದೇವಸ್ಥಾನ ಕಟ್ಟಲು ಮುಂದಾಗಿದ್ದಾರೆ ಹೊರತು ಗ್ರಂಥಾಲಯ ನಿರ್ಮಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರವಿಂದ್ರನಾಥ ಟ್ಯಾಗೋರ್, ಮಹತ್ಮಾಗಾಂಧಿ ಸೇರಿ ಅನೇಕ ಮಹನಿಯರಿಗೆ ಮಾರ್ಗದರ್ಶನ ನೀಡಿದ್ದರು. ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ .ಪಾಲಕರು ಮಕ್ಕಳಿಗೆ ತಿಳಿಸಬೇಕು. ತಂದೆ–ತಾಯಿ, ಗುರುಬಲವಿದ್ದರೆ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರು ಸಮಾಜ ಪರಿವರ್ತನೆಯ ಹರಿಕಾರರು. ಅಂದಿನ ಸಮಾನತೆ, ಕಂದಾಚಾರ, ಮೌಢ್ಯಾಚರಣೆಗಳು ಇಂದಿಗೂ ಜೀವಂತವಾಗಿದ್ದು ಅವರ ವಿಚಾರಗಳನ್ನು ಹೆಚ್ಚಿನ ಪ್ರಚಾರ ಮಾಡಿ ಸಮಾಜದ ಬೆಳವಣಿಗೆಗೆ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಸಮಾಜದ ಮುಖಂಡರು ಒಗ್ಗಟ್ಟಿದ್ದರೆ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯ. ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕಲ್ಪಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಎಲ್., ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜನೇಯ, ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಘವೇಂದ್ರ ಗೌಡ, ತಾಲ್ಲೂಕಾಧ್ಯಕ್ಷ ಬಸವರಾಜಗೌಡ, ಮುಖಂಡ ಖಾಜನಗೌಡ, ನರಸನಗೌಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.