ರಾಯಚೂರು: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಹೊರಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೀಶ್ ಕೆ. ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೀಮಿತವಾಗಿ ಜಾರಿಯಲ್ಲಿರುತ್ತದೆ.
ಉಪ ಚುನಾವಣೆ ನಡೆಯುವ ಕ್ಷೇತ್ರಗಳು: ರಾಯಚೂರು ತಾಲ್ಲೂಕಿನ ತಲೆಮಾರಿ, ಜಂಬಲದಿನ್ನಿ, ಪುಚ್ಚಲದಿನ್ನಿ ಗ್ರಾಮ ಪಂಚಾಯಿತಿ, ಮಾನ್ವಿ ತಾಲ್ಲೂಕಿನ ಸಂಗಾಪೂರು ಗ್ರಾಮ ಪಂಚಾಯಿತಿಯ ಆರ್.ಜಿ ಕ್ಯಾಂಪ್-3, ಲಿಂಗಸುಗೂರು ತಾಲ್ಲೂಕಿನ ದೇವರಭೂಪೂರ-5 ಗ್ರಾಮ ಪಂಚಾಯಿತಿಯ ಐದಭಾವಿ-5, ರೋಡಲಬಂಡಾ (ಯು.ಕೆ.ಪಿ), ತೋರಲಬೆಂಚಿ-01, ಸಿಂಧನೂರು ತಾಲ್ಲೂಕಿನ ವಿರುಪಾಪುರ-04, ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮ ಪಂಚಾಯಿತಿಯ ಕೊಟೆಕಲ್ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ.
28ರವರೆಗೆ ನೀತಿ ಸಂಹಿತೆ: ಮೇ.8ರಿಂದ ಮೇ.28ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ನಾಮಪತ್ರ ಸಲ್ಲಿಸಲು ಮೇ14 ಕೊನೆ ದಿನ. 15ರಂದು ನಾಮಪತ್ರ ಪರಿಶೀಲನೆ ಮಾಡಲಾಗುವುದು. ಮೇ17ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಕೊನೆಯ ದಿನ. ಮೇ25ರ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಗೆ ವರೆಗೆ ಮತದಾನ ನಡೆಸಲಾಗುವುದು. ಅವಶ್ಯವಿದ್ದರೆ ಮೇ.27ರಂದು ಮರು ಮತದಾನ ನಡೆಯಲಿದೆ.
ಮೇ28ರ ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಸಲಾಗುವುದು. ಚುನಾವಣೆ ಶಾಂತಿಯುತವಾಗಿ ಜರುಗಿಸುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಬಾಲೆಟ್ ಪೇಪರ್ ಮೂಲಕ ಮತದಾನ ನಡೆಯಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.