ADVERTISEMENT

ಪಾರದರ್ಶಕ, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ: ಸದಾಶಿವಪ್ಪ

ಉಪಚುನಾವಣೆ: ಮತ ಎಣಿಕೆಗೆ ಪೂರ್ವತಯಾರಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 14:29 IST
Last Updated 26 ಏಪ್ರಿಲ್ 2021, 14:29 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಗೆ ಸಂಬಂಧಿಸಿ ಸೋಮವಾರ ಆಯೋಜಿಸಿದ್ದ ಪೂರ್ವಸೂಚನಾ ಸಭೆಯಲ್ಲಿ ಪಾಲ್ಗೊಂಡಿದ್ದ ನಿಯೋಜಿತ ಸಿಬ್ಬಂದಿ
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಗೆ ಸಂಬಂಧಿಸಿ ಸೋಮವಾರ ಆಯೋಜಿಸಿದ್ದ ಪೂರ್ವಸೂಚನಾ ಸಭೆಯಲ್ಲಿ ಪಾಲ್ಗೊಂಡಿದ್ದ ನಿಯೋಜಿತ ಸಿಬ್ಬಂದಿ   

ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಮತಎಣಿಕೆಯು ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನಲ್ಲಿ ಮೇ 2 ರಂದು ನಡೆಯಲಿದ್ದು, ಯಾವುದೇ ಗೊಂದಲಗಳು, ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಪಾರದರ್ಶಕ ಹಾಗೂ ಎಚ್ಚರಿಕೆಯಿಂದ ಎಣಿಕೆ ಕಾರ್ಯ ನಿರ್ವಹಿಸುವುದಕ್ಕೆ ತರಬೇತಿಯಲ್ಲಿ ನೀಡುವ ಅಂಶಗಳನ್ನು ಪಾಲಿಸಬೇಕು ಎಂದು ಮಾಸ್ಟರ್ ತರಬೇತಿದಾರ ಸದಾಶಿವಪ್ಪ ಮತ ಎಣೆಕೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ಮನವರಿಕೆ ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ಮತ ಎಣಿಕೆ ಕುರಿತಂತೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವತಯಾರಿ ಸಭೆಯಲ್ಲಿ ಮಾತನಾಡಿದರು.

ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಮತ ಎಣಿಕಾ ಕಾರ್ಯದ ಕುರಿತು ಸಮಸ್ಯೆಗಳಿದ್ದಲ್ಲೀ, ಅವುಗಳನ್ನು ಕೂಡಲೇ ಇಲ್ಲಿಯೇ ಬಗೆಹರಿಸಿಕೊಳ್ಳಬೇಕು. ಮತದಾನ ಪೂರ್ಣಗೊಂಡ ನಂತರ ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನ ಸ್ಟ್ರಾಂಗ್‌ ರೂಮಿನಲ್ಲಿ ಇರಿಸಲಾಗಿದೆ, ಮತಎಣೆಕೆ ನಡೆಯಲಿರುವ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನ ಎಣಿಕೆ ಕೋಣೆಯಲ್ಲಿ ಏಜೆಂಟರುಗಳಿಗೆ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಿಂದ ಪ್ರಾರಂಭಿಸಿ ಇಳಿಕೆ ಅನುಕ್ರಮಣಿಯಲ್ಲಿ ಸ್ವತಂತ್ರ ಅಭ್ಯರ್ಥಿಗಳಿಂದ ಪ್ರಾಶಸ್ತ್ಯದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ADVERTISEMENT

ಮತ ಎಣಿಕೆಗೆ ಎರಡು ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಕೊಠಡಿ ಸಂಖ್ಯೆ 1 ರಲ್ಲಿ ಚುನಾವಣಾಧಿಕಾರಿಗಳು ಹಾಜರಾಗಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ 7 ಟೇಬಲ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಕೊಠಡಿ ಸಂಖ್ಯೆ 2 ರಲ್ಲಿ ಸಹಾಯಕ
ಚುನಾವಣಾಧಿಕಾರಿಗಳು ಇರುತ್ತಾರೆ. 7 ಟೇಬಲ್ ಸೇರಿ ಒಟ್ಟು 14 ಟೇಬಲ್‌ಗಳನ್ನು ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗುತ್ತದೆ
ಎಂದು ತಿಳಿಸಿದರು.

ಮೇ 2 ರಂದು ಬೆಳಿಗ್ಗೆ 8 ಗಂಟೆಗೆ ಸ್ಟ್ರಾಂಗ್‌ ರೂಮ್‌ ತೆರೆಯಲಾಗುವುದು, ಬಾಗಿಲು ತೆರೆಯುವ ಪೂರ್ವದಲ್ಲಿ ಅಭ್ಯರ್ಥಿಗಳು ಸೀಲ್ ಪರಿಶೀಲಿಸಲು ಅವಕಾಶ ನೀಡಲಾಗಿದೆ. ಅವರು ಎಣಿಕೆ ಪ್ರಾರಂಭಕ್ಕಿಂತ ಒಂದು ಗಂಟೆ ಮುಂಚೆ ಹಾಜರಾಗಬೇಕು. ಏಜೆಂಟರ್‌ಗಳು ಕಡ್ಡಾಯವಾಗಿ ಬ್ಯಾಡ್ಜ್ ಧರಿಸಬೇಕು, ಎಣಿಕೆ ಕೇಂದ್ರದಲ್ಲಿ ಮೊಬೈಲ್ ಪೋನ್ ನಿಷೇಧಿಸಲಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡಬೇಕು ಮತ್ತು ವಿದ್ಯುನ್ಮಾನ ಮತಯಂತ್ರಗಳನ್ನು ಮುಟ್ಟಕೂಡದು, ಚುನಾವಣಾಧಿಕಾರಿಗಳ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರು.

ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ವೀಕ್ಷಕರು, ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಚುನಾವಣಾ ಮೇಲ್ವಿಚಾರಕರಿರುವರು ಎಂದರು.

ಚುನಾವಣಾಧಿಕಾರಿ ರಾಜಶೇಖರ ಡಂಬಳ ಮಾತನಾಡಿ, ಮತ ಎಣಿಕಾ ಸಿಬ್ಬಂದಿಗೆ ಇದೇ ಏಪ್ರಿಲ್‌ 28 ಅಥವಾ 29 ರಂದು ಕೋವಿಡ್ ತಪಾಸಣೆ ಮಾಡಲಾಗುತ್ತದೆ, 40 ಮೇಲ್ವಿಚಾರಕರು, 40 ಸಹಾಯಕರು, 40 ಮೈಕ್ರೋ ವೀಕ್ಷಕರು ಸೇರಿ ಒಟ್ಟು 120 ಸಿಬ್ಬಂದಿ ಮತ ಎಣೆಕೆ ನೇಮಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.