ADVERTISEMENT

ಕೆನರಾ ಬ್ಯಾಂಕ್‌ ರಾಯಚೂರು ಪ್ರಾದೇಶಿಕ ಶಾಖೆಗಳ ಸಭೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 14:27 IST
Last Updated 19 ಆಗಸ್ಟ್ 2019, 14:27 IST
ರಾಯಚೂರಿನ ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರದಿಂದ ಎರಡು ದಿನಗಳವರೆಗೆ ಪ್ರಾದೇಶಿಕ ಶಾಖೆಗಳ ಮಟ್ಟದ ಸಮಾಲೋಚಣೆ ಸಭೆ ನಡೆಯಿತು
ರಾಯಚೂರಿನ ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರದಿಂದ ಎರಡು ದಿನಗಳವರೆಗೆ ಪ್ರಾದೇಶಿಕ ಶಾಖೆಗಳ ಮಟ್ಟದ ಸಮಾಲೋಚಣೆ ಸಭೆ ನಡೆಯಿತು   

ರಾಯಚೂರು: ಕೆನರಾ ಬ್ಯಾಂಕ್‌ ರಾಯಚೂರು ಪ್ರಾದೇಶಿಕ ಕಚೇರಿಯಲ್ಲಿ ಶನಿವಾರದಿಂದ ಎರಡು ದಿನಗಳ ಪ್ರಾದೇಶಿಕ ಶಾಖಾ ಮಟ್ಟದ ಸಭೆ ನಡೆಯಿತು.

ಬ್ಯಾಂಕಿನ ಬೆಂಗಳೂರು ವೃತ್ತ ಕಚೇರಿಯ ಉಪ ಮಹಾಪ್ರಬಂಧಕ ಟಿ.ಜಿ. ಬೋರಯ್ಯ ಅವರು ಸಭೆ ಉದ್ಘಾಟಿಸಿದರು.

ಆನಂತರ ಮಾತನಾಡಿದ ಅವರು, ಪ್ರಾದೇಶಿಕ ಮಟ್ಟದಲ್ಲಿ ಇದೇ ಮೊದಲ ಸಲ ರಾಯಚೂರಿನಲ್ಲಿ ಸಮಾಲೋಚನೆ ಸಭೆ ನಡೆಸುತ್ತಿರುವುದು ವಿಶೇಷವಾಗಿದೆ ಎಂದರು.

ADVERTISEMENT

ರಾಯಚೂರು ಪ್ರಾದೇಶಿಕ ವಿಭಾಗೀಯ ಕಚೇರಿಯ ಪ್ರಬಂಧಕರಾದ ವಿ.ಎಸ್‌. ಶಿವಕುಮಾರ್‌ ಮತ್ತು ವಿಪಿನ್‌ ಕುಮಾರಸಿಂಗ್‌ ಮಾತನಾಡಿ, ಬ್ಯಾಂಕ್‌ನ ಪ್ರತಿಯೊಂದು ಶಾಖಾ ಮುಖ್ಯಸ್ಥರು ಸಮಾಲೋಚನೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಕಳೆದ ಐದು ವರ್ಷಗಳಲ್ಲಿ ಶಾಖಾ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಎದುರಿಸಲು ಅಳವಡಿಸಿಕೊಳ್ಳಬೇಕಾದ ಕಾರ್ಯಸೂಚಿಯ ಬಗ್ಗೆ ಚರ್ಚಿಸಲಾಯಿತು.

ಲಭ್ಯವಿರುವ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಗ್ರಾಹಕ ಸ್ನೇಹಿಗೊಳಿಸಬೇಕು. ಹಿರಿಯ ನಾಗರಿಕರು, ಸಣ್ಣ ಉದ್ದಿಮೆದಾರರು, ಮಹಿಳೆಯರು, ಕೃಷಿಕರು, ಯುವ ಜನಾಂಗದ ಅವಶ್ಯಕತೆಗೆ ತಕ್ಕಂತೆ ಸ್ಪಂದಿಸಬೇಕಾಗಿದೆ ಎನ್ನುವ ವಿಷಯಗಳು ಪ್ರಸ್ತಾಪವಾದವು.

ಪರಿಣಿತರು ವಿವಿಧ ವಿಷಯಗಳಲ್ಲಿ ವಿಷಯ ಮಂಡನೆ ಮಾಡಿದರು. ಆನಂತರ ಚರ್ಚಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥೆಯಲ್ಲಿ ಸುಧಾರಣೆ ಕೈಗೊಳ್ಳುವ ಸಂಬಂಧವಾಗಿ ಕೇಂದ್ರ ಹಣಕಾಸು ಸೇವೆಗಳ ಸಚಿವಾಲಯವು ನೀಡಿದ್ದ ನಿರ್ದೇಶನದಂತೆ ಈ ಸಭೆ ಆಯೋಜಿಸಲಾಗಿತ್ತು. ರಾಯಚೂರು ಪ್ರಾದೇಶಿಕ ವ್ಯಾಪ್ತಿಯ ಬಳ್ಳಾರಿ, ಬಾಗಲಕೋಟ, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಕೆನರಾ ಬ್ಯಾಂಕ್‌ ಎಲ್ಲ ಶಾಖೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.