ರಾಯಚೂರು ಜಿಲ್ಲೆಯಲ್ಲಿ 1,853 ಗಣತಿದಾರರ ನೇಮಕ | 7 ನೋಡಲ್ ಅಧಿಕಾರಿ, 200 ಮೇಲ್ವಿಚಾರಕರು 42 ಪ್ರಶ್ನೆ ಕೇಳಲು 20 ನಿಮಿಷ ನಿಗದಿ
ರಾಯಚೂರು: ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳ ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ನಡೆಸಿರುವ ಗಣತಿದಾರರು ಈಗಲೂ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗಣತಿದಾರರಿಗೆ ಸುಲಭವಾಗಿ ಆ್ಯಪ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ.
ಅವಿಭಕ್ತ ಕುಟುಂಬಗಳು ಇರುವಲ್ಲಿ ಹೆಚ್ಚು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕುಟುಂಬದ ಯಜಮಾನನ ಆಧಾರ್ ಸಂಖ್ಯೆ ಹಾಗೂ ಪಡಿತರ ಚೀಟಿ ಸಂಖ್ಯೆ ಉಲ್ಲೇಖಿಸಿ ನೋಂದಣಿ ಮಾಡಿಕೊಳ್ಳುವಾಗಲೇ ಕೆಲವೊಮ್ಮೆ ಮೃತಪಟ್ಟಿದ್ದಾರೆ ಎನ್ನುವ ಸಂದೇಶ ಬರುತ್ತಿದೆ. ಮಾಹಿತಿ ಕೊಡುವ ವ್ಯಕ್ತಿಯನ್ನೇ ‘ನೀವು ಬದುಕಿದ್ದೀರಾ’ ಎಂದು ಕೇಳುವಂಥ ಸ್ಥಿತಿ ಸೃಷ್ಟಿಯಾಗುತ್ತಿದೆ.
ಕುಟುಂಬದ ಸದಸ್ಯರ ಆಧಾರ ಸಂಖ್ಯೆ ಸರಿಯಾಗಿದ್ದರೂ ಆ್ಯಪ್‌ನಲ್ಲಿ ಕೆಲವೊಮ್ಮೆ ಎರಡೆರಡು ಬಾರಿ ಕಾಣಿಸಿಕೊಳ್ಳುತ್ತಿದೆ. ಒಂದನ್ನು ಡಿಲಿಟ್ ಮಾಡಲು ಹೋದರೆ, ಎರಡೂ ಡಿಲಿಟ್ ಆಗುತ್ತಿವೆ. ಹೀಗಾಗಿ ಗಣತಿದಾರರು ಒಂದೇ ವ್ಯಕ್ತಿಯ ಮಾಹಿತಿಯನ್ನು ಎರಡು ಬಾರಿ ತುಂಬಬೇಕಾಗಿದೆ.
ಒಂದೇ ಕುಟುಂಬಕ್ಕೆ ಸೇರಿದ ಸದಸ್ಯರ ಆಧಾರ್ ಕಾರ್ಡ್‌ಗಳಲ್ಲಿ ಬೇರೆ ಬೇರೆ ಮೊಬೈಲ್ ನಂಬರ್‌ಗಳು ಇವೆ. ಕೆಲ ಮೊಬೈಲ್ ನಂಬರ್‌ಗಳು ಚಾಲ್ತಿಯಲ್ಲಿ ಇಲ್ಲ. ಕೆಲವು ನಂಬರ್‌ಗಳು ಬದಲಾಗಿವೆ. ಆಧಾರ್ ಕೇಂದ್ರಕ್ಕೆ ಹೋಗಿ ನಂಬರ್‌ಗಳನ್ನು ಬದಲು ಮಾಡಿಸಿದ್ದರೂ ಆಧಾರ್‌ನಲ್ಲಿ ನಂಬರ್ ಬದಲಾಗಿರುವುದಿಲ್ಲ. ಒಟಿಪಿ ಹಾಕದೇ ಲಾಗಿನ್ ಆಗುವುದಿಲ್ಲ. ಹೀಗಾಗಿ ಮಾಹಿತಿ ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ.
ಕೆಲ ಗಣತಿದಾರರಿಗೆ ಸರಿಯಾಗಿ ಅಪ್ಲೋಡ್ ಮಾಡಲು ಬರುತ್ತಿಲ್ಲ. ಹೊಸ ಆ್ಯಪ್ ಬಳಸುತ್ತಿದ್ದರೂ ಗಣತಿದಾರರಿಗೆ ಇನ್ನೂ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ. ಗಣತಿದಾರರಿಗೆ 150ರಿಂದ 200 ಮನೆಗಳನ್ನು ನಿಗದಿಪಡಿಸಲಾಗಿದೆ. ನೆಟ್‌ವರ್ಕ್ ಹಾಗೂ ತಾಂತ್ರಿಕ ಸಮಸ್ಯೆಯಿಂದ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಲು ಕನಿಷ್ಠ 1 ಗಂಟೆಯಿಂದ 2 ಗಂಟೆ ಸಮಯ ತಗಲುತ್ತಿದೆ. ಹೀಗಾಗಿ ಆಧಾರ್ ಕಾರ್ಡ್‌ಗಳ ನಕಲು ಪ್ರತಿಯನ್ನು ತೆಗೆದುಕೊಂಡು ಮತಗಟ್ಟೆಗೆ ಬರುವಂತೆ ಹೇಳಿ ಹೋಗುತ್ತಿದ್ದಾರೆ.
‘ಜಿಲ್ಲೆಯಲ್ಲಿ ವಿಪರೀತ ಬಿಸಿಲು ಇದೆ. ನಡುಗಡ್ಡೆ ಗ್ರಾಮಗಳಿಗೆ ಹೋಗಿ ಬರಲು ಸರಿಯಾದ ಸಾರಿಗೆ ಸಂಪರ್ಕವಿಲ್ಲ. ಮನೆ ಮನೆಗೂ ತೆರಳಿ ಸಮೀಕ್ಷೆ ಮಾಡಲೇಬೇಕಾಗಿದೆ. ಮಧ್ಯ ವಯಸ್ಕರು ಬಿಸಿಲಿನಿಂದ ಬಳಲಿ ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎನ್ನುತ್ತಾರೆ ಗಣತಿ ಕಾರ್ಯದಲ್ಲಿ ತೊಡಗಿರುವ ರಾಯಚೂರು ತಾಲ್ಲೂಕಿನ ಶಿಕ್ಷಕರು.
‘ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಹೋಬಳಿ ವ್ಯಾಪ್ತಿಯ ಕೆನಾಲ್ ಕ್ರಾಸ್ ಗ್ರಾಮದಲ್ಲಿ ಜಾತಿ ಸಮೀಕ್ಷೆಗೆ ನೆಟ್‌ವರ್ಕ್ ಸಮಸ್ಯೆಯಾಗಿದೆ. ಆಫ್‌ಲೈನ್‌ನಲ್ಲಿ ಮಾಹಿತಿ ಕಲೆ ಹಾಕಿ ನೆಟ್‌ವರ್ಕ್ ಇರುವ ಕಡೆಗೆ ಬಂದು ಪೂರ್ಣ ಮಾಹಿತಿ ಅಪ್‌ಲೋಡ್ ಮಾಡುತ್ತಿರುವ ಕಾರಣ ಸಮೀಕ್ಷೆ ನಿಧಾನಗತಿಯಲ್ಲಿ ಸಾಗಿದೆ. ಕುಟುಂಬದ ಮುಖ್ಯಸ್ಥರು ಪರಿಶಿಷ್ಟ ಜಾತಿಯವರಿದ್ದರೂ ಪಡಿತರ ಚೀಟಿಯಲ್ಲಿ ಪರಿಶಿಷ್ಟ ಪಂಗಡ ಎಂದು ತೋರಿಸುತ್ತಿರುವ ಕಾರಣ ಗೊಂದಲ ಉಂಟಾಗಿದೆ. ತಹಶೀಲ್ದಾರ್ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಕೋರಲಾಗಿದೆ’ ಎಂದು ಸಮೀಕ್ಷೆ ಕಾರ್ಯದ ಮೇಲ್ವಿಚಾರಕ ನಾಗಪ್ಪ ಜಿ. ಹೇಳುತ್ತಾರೆ.
‘2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 73 ಸಾವಿರ ಪರಿಶಿಷ್ಟರ ಕುಟುಂಬಗಳಿದ್ದವು. ಜಿಲ್ಲೆಯಲ್ಲಿ 82 ಸಾವಿರ ಕುಟುಂಬಗಳ ಸಮೀಕ್ಷೆ ಮುಗಿದಿದೆ. ಜಿಲ್ಲೆಯಲ್ಲಿ ಒಟ್ಟು 86 ಸಾವಿರ ಕುಟುಂಬಗಳು ಇರಬಹುದು. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ ದಾಖಲೆ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದ.
‘ಎರಡನೇ ಹಂತದಲ್ಲಿ ಮೇ 19ರಿಂದ 28ರವರೆಗೆ ಶಿಬಿರ ನಡೆಯಲಿದೆ. ಅಲ್ಲಿ ನೋಂದಣಿಗೆ ಅವಕಾಶ ಇದೆ. ಮೂರನೇ ಹಂತದಲ್ಲಿ ಸ್ವಯಂ ದೃಢೀಕರಣ ಸಲ್ಲಿಕೆಗೆ ಮೇ 28ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಸಮೀಕ್ಷೆಯಿಂದ ಒಂದು ಕುಟುಂಬವೂ ಹೊರಗುಳಿಯದು’ ಎಂದು ಹೇಳಿದರು.
ಒಂದು ಕುಟುಂಬದ ಮಾಹಿತಿ ಅಪ್ಲೋಡ್ ಮಾಡಲು ಕನಿಷ್ಠ 20 ನಿಮಿಷ ಬೇಕು. ಪ್ರತಿ ದಿನ 15ರಿಂದ 20ರಷ್ಟು ಕುಟುಂಬಗಳ ಗಣತಿ ಕಾರ್ಯ ಮಾಡುತ್ತಿದ್ದೇವೆಎಂ.ಎಂ.ಹಿರೇಮಠ ಗಣತಿದಾರ ಮಾನ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.