ಲಿಂಗಸುಗೂರು: ‘ಹಿಂದೂ ಧರ್ಮವನ್ನು ಒಡೆಯುವ ದುರುದ್ದೇಶದಿಂದ ಸಿಎಂ ಸಿದ್ಧರಾಮಯ್ಯನವರು ಜಾತಿ ಗಣತಿ ಮಾಡಿಸಿದ್ದಾರೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘₹200 ಕೋಟಿ ಖುರ್ಚು ಮಾಡಿ ಜಾತಿ ಗಣತಿ ಮಾಡಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಹೇಳಿದ್ದಾರೆ. ಆದರೆ ಯಾವ ಪುರುಷಾರ್ಥಕ್ಕೆ ಖರ್ಚು ಮಾಡಿದ್ದೀರಿ? ಮನೆಮನೆಗೆ ಭೇಟಿ ನೀಡದೇ ಎಲ್ಲೋ ಕುಳಿತು ಗಣತಿ ಮಾಡಿದ್ದಾರೆ. ಇದನ್ನು ನಾವು ಒಪ್ಪುವುದಿಲ್ಲ. ಸಿದ್ಧರಾಮಯ್ಯನವರು ಗಣತಿ ವರದಿ ತಿರಸ್ಕಾರ ಮಾಡಿ ಮತ್ತೊಮ್ಮೆ ಗಣತಿ ಕಾರ್ಯ ಮಾಡಬೇಕು’ ಎಂದರು.
‘ಸಿದ್ಧರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ಎಂಬ ಅಸ್ತ್ರವಾಗಿಸಿಕೊಂಡಿದ್ದಾರೆ. ಆದರೆ ಅದೇ ಅಸ್ತ್ರ ಬ್ರಹ್ಮಾಸ್ತ್ರವಾಗಲಿದೆ’ ಎಂದರು.
‘ಧರ್ಮ ಆಧಾರಿತ ಮೀಸಲಾತಿ ನೀಡಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದ್ದರೂ ಅದಕ್ಕೆ ವಿರುದ್ಧವಾಗಿ ಸಿದ್ಧರಾಮಯ್ಯನವರು ಮುಸ್ಲಿಂ ಸಮುದಾಯಕ್ಕೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ 4ರಷ್ಟು ಮೀಸಲಾತಿ ನೀಡಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ಒಳಮೀಸಲಾತಿ ಜಾರಿ ಮಾಡುವೆ ಎಂದು ಹೇಳಿ ಈಗ ಸಮಿತಿ ಮಾಡಿ ನಾಟಕ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಪಂಚಮಸಾಲಿ ಸಮಾಜ ತಾಲ್ಲೂಕು ಅಧ್ಯಕ್ಷ ಸುಭಾಷ ಪಲ್ಲೇದ, ಮುಖಂಡರಾದ ಶಂಕರಗೌಡ ಅಮರಾವತಿ, ಅಮರೇಶ ತಾವರಗೇರಾ, ಮಾರುತಿ ಗೋಸ್ಲೆ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.